Connect with us

ಇತರ

ಕೇಂದ್ರದಿಂದ UPI ಶಾಕ್…!!! UPI ವಹಿವಾಟುಗಳ ಮೇಲೆ ಶುಲ್ಕ : ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

Published

on

ಯುಪಿಐ ಮೂಲಕ ವ್ಯಕ್ತಿಗಳಿಂದ ವ್ಯಾಪಾರಿಗಳಿಗೆ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕ್ರಮದ ಆಧಾರವನ್ನು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.28) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಸೆಪ್ಟೆಂಬರ್ 14 ಮತ್ತು 15 ರಂದು ಕೇಂದ್ರ ಹಣಕಾಸು ಸಚಿವಾಲಯವು ಹೊರಡಿಸಿದ ಗೆಜೆಟ್ ಅಧಿಸೂಚನೆಗಳನ್ನು ಪ್ರಶ್ನಿಸಿ ವಕೀಲ ಅಂಜನ್ ದತ್ತಾ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ್ದು, ಈ ಗೆಜೆಟ್ ಅಧಿಸೂಚನೆಗಳ ಮೂಲಕ ರೂ. 2,000 ಕ್ಕಿಂತ ಹೆಚ್ಚಿನ ವಾಣಿಜ್ಯ ಯುಪಿಐ ವಹಿವಾಟುಗಳ ಮೇಲೆ ಶುಲ್ಕವನ್ನು ಘೋಷಿಸಲಾಗಿದೆ. ವಿಚಾರಣೆಯ ಆರಂಭದಲ್ಲಿ, ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎನ್. ವೆಂಕಟರಾಮನ್ ಅವರು, ಈ ಶುಲ್ಕಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ. ಶೇಕಡಾ 96ರಷ್ಟು ವಹಿವಾಟುಗಳಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ ಮತ್ತು ಅತ್ಯಗತ್ಯ ಸೇವೆಗಳ ಮೇಲಿನ ಶುಲ್ಕವನ್ನು ಗರಿಷ್ಠ ರೂ. 5ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮುಂದುವರಿದು, “ಇದು ತೆರಿಗೆಯೂ ಅಲ್ಲ ಅಥವಾ ಶುಲ್ಕವೂ ಅಲ್ಲ” ಎಂದು ಎಎಸ್‌ಜಿ ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು “ನಮಗೆ ಈ ಸಂಗತಿಗಳು ಅಫಿಡವಿಟ್ ರೂಪದಲ್ಲಿ ಬೇಕು. ಇದು ಹೆಚ್ಚಾಗಿ ತಾಂತ್ರಿಕ ವಿಷಯವಾಗಿದೆ” ಎಂದು ಹೇಳಿದ್ದಾರೆ. “ಇದು ತೆರಿಗೆಯೋ ಅಥವಾ ಶುಲ್ಕವೋ? ಶುಲ್ಕವಲ್ಲದಿದ್ದರೆ, ಈ ರೀತಿಯ ಬಲವಂತದ ವಸೂಲಾತಿಯನ್ನು (ಸ್ವಾಧೀನಪಡಿಸಿಕೊಳ್ಳುವಿಕೆಯನ್ನು) ಮಾಡಲು ಕಾರ್ಯಾಂಗದ ಆಧಾರವೇನು? ಇಲ್ಲಿ ನೀಡಲಾಗುತ್ತಿರುವ ಸೇವೆ ಆದರೂ ಏನು?” ಎಂದು ನ್ಯಾಯಮೂರ್ತಿ ಬಾಗ್ಚಿ ಅವರು ಕೇಳಿದ್ದಾರೆ. “ಇದು ಯಾವುದೇ ಬಲವಂತದ ವಸೂಲಾತಿಯಲ್ಲ” ಎಂದು ದೃಢೀಕರಿಸಿದ ಎಎಸ್‌ಜಿ, ಈ ಶುಲ್ಕಗಳಿಂದ ಭಾರತ ಸರ್ಕಾರವು ಒಂದು ರೂಪಾಯಿಯನ್ನೂ ಪಡೆಯುತ್ತಿಲ್ಲ ಮತ್ತು ಇದು ಪಾವತಿ ಸಂಯೋಜಕರು (payment aggregators) ಹಾಗೂ ಬ್ಯಾಂಕುಗಳ ನಡುವಿನ ಇತ್ಯರ್ಥದ ಶುಲ್ಕವಾಗಿದೆ (settlement fee) ಎಂದು ಸಮರ್ಥಿಸಿಕೊಂಡಿದ್ದಾರೆ. ಬ್ಯಾಂಕುಗಳು ಎಲೆಕ್ಟ್ರಾನಿಕ್ ವಹಿವಾಟುಗಳನ್ನು ನಡೆಸುವಾಗ ಅದಕ್ಕೆ ತಗಲುವ ವೆಚ್ಚವಿರುತ್ತದೆ, ಹಾಗೆಯೇ ಕ್ರೆಡಿಟ್/ಡೆಬಿಟ್ ಕಾರ್ಡ್ ವಹಿವಾಟುಗಳಿಗೂ ಶುಲ್ಕಗಳು ಅನ್ವಯಿಸುತ್ತವೆ ಮತ್ತು ಯುಪಿಐ ಪಾವತಿಗಳಿಗೆ ಈ ಶುಲ್ಕಗಳಿಂದ ವಿನಾಯಿತಿ ನೀಡಲಾಗಿತ್ತು. ಆದರೆ, ಈ ಇಡೀ ವ್ಯವಸ್ಥೆಯು (ecosystem) ಸಮರ್ಥವಾಗಿ ಕಾರ್ಯನಿರ್ವಹಿಸಲು ಈ ಶುಲ್ಕಗಳು ಅಗತ್ಯವಾಗಿವೆ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಬಾಗ್ಚಿ ಅವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269SU ಅನ್ನು ಉಲ್ಲೇಖಿಸಿದ್ದು, ಈ ಸೆಕ್ಷನ್, ನಿಗದಿತ ವಹಿವಾಟಿನ ಮಿತಿಯನ್ನು ಹೊಂದಿರುವ ವ್ಯಾಪಾರಿಗಳು ಗ್ರಾಹಕರಿಗೆ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಪಾವತಿ ಸೌಲಭ್ಯವನ್ನು ಒದಗಿಸಬೇಕು ಎಂದು ಸೂಚಿಸುತ್ತದೆ. “269 ವರ್ಗಾವಣೆಗೆ ಅನುಮತಿ ನೀಡುತ್ತದೆ… ಒಂದು ವೇಳೆ ಅದು ವರ್ಗಾವಣೆಗೆ ಅನುಮತಿ ನೀಡಿದರೆ, ಒಬ್ಬ ತೆರಿಗೆದಾರನಿಂದ ಮತ್ತೊಬ್ಬರಿಗೆ ನಗದು ವರ್ಗಾವಣೆಯಾಗುತ್ತದೆ… ಹಾಗಿದ್ದರೆ ಈ ಸ್ವೀಕೃತಿಯ ಸ್ವರೂಪವೇನು? ಯುಪಿಐನಲ್ಲಿ ಇದನ್ನು ಯಾರು ಪಡೆಯುತ್ತಾರೆ?… ನಾವು ಇದರ ವ್ಯಾಪ್ತಿಯ ಬಗ್ಗೆ ಮಾತನಾಡುತ್ತಿಲ್ಲ. ನಾವು ಇದರ ಕಾನೂನುಬದ್ಧ ಹೊಣೆಗಾರಿಕೆಯ (legal incidence) ಬಗ್ಗೆ ಮಾತನಾಡುತ್ತಿದ್ದೇವೆ. ಈ ಕಾನೂನುಬದ್ಧ ಹೊಣೆಗಾರಿಕೆಯ ಮೂಲ ಯಾವುದು?” ಎಂದು ನ್ಯಾಯಮೂರ್ತಿ ಬಾಗ್ಚಿ ಪ್ರಶ್ನಿಸಿದ್ದಾರೆ.
ಪೀಠವು ಕೇಂದ್ರ ಸರ್ಕಾರ, ಆರ್‌ಬಿಐ ಮತ್ತು ಎನ್‌ಪಿಸಿಐಗೆ ನೋಟಿಸ್ ಜಾರಿ ಮಾಡಿದಾಗ, ಈ ಕ್ರಮದಿಂದಾಗಿ ಕಪ್ಪುಹಣದ ವಹಿವಾಟುಗಳು ಹೆಚ್ಚಾಗಲಿವೆ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು, ಈ ನಿರ್ಧಾರಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಆದರೆ, ಪೀಠವು ಈ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಈ ಅರ್ಜಿಯನ್ನು ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಯುಪಿಐ ಹಾಗೂ ಸರ್ವಿಸಸ್ ಸ್ಟೀರಿಂಗ್ ಕಮಿಟಿಗಳ ವಿರುದ್ಧ ಸಲ್ಲಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement