Published
7 months agoon
By
Akkare Newsಬೆಂಗಳೂರು: ಮೈಸೂರಿನ ಕೆ.ಆರ್.ನಗರದ ಮಹಿಳೆಯ ಅಪಹರಣದಲ್ಲಿ ಎಸ್‌ಐಟಿ ಕೊಟ್ಟಿರುವ ನೋಟಿಸ್‌ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪಂದಿಸದ ಬೆನ್ನಲ್ಲೇ ಅವರಿಗೂ ಬಂಧನದ ಭೀತಿ ಶುರುವಾಗಿದೆ.
ಇದೀಗ ಮುಂಜಾಗ್ರತಾ ಕ್ರಮವಾಗಿ ಜಾಮೀನು ಕೋರಿ ಭವಾನಿ ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಕೆ.ಆರ್.ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಾಸಕ ಎಚ್.ಡಿ.ರೇವಣ್ಣ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕುಮ್ಮಕ್ಕು ಕೊಟ್ಟ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣಗೂ ಎಸ್‌ಐಟಿ 2ನೇ ಬಾರಿ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಭವಾನಿ ಸುಮ್ಮನಾಗಿದ್ದರು. ಇದೀಗ ಅವರಿಗೂ ಬಂಧನ ಭೀತಿ ಎದುರಾಗಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.
ಯಾವ ನಿಯಮದಡಿ ನೋಟಿಸ್ ನೀಡಿದ್ದಾರೆಂದು ಎಸ್‌ಐಟಿ ಅದರಲ್ಲಿ ಹೇಳಲಿಲ್ಲ. ಈ ಹಿನ್ನೆಲೆಯಲ್ಲಿ ಭವಾನಿ ಅವರನ್ನು ಬಂಧಿಸುವ ಆತಂಕವಿದೆ. ಹೀಗಾಗಿ ಮಧ್ಯಂತರ ಜಾಮೀನು ನೀಡುವಂತೆ ಭವಾನಿ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು. ಇದನ್ನು ಆಲಿಸಿದ ನ್ಯಾಯಾಲಯವು, ಇದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಎಸ್‌ಐಟಿಗೆ ನೋಟಿಸ್ ನೀಡಿ ಜಾಮೀನು ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ (ಮೇ 28) ಮುಂದೂಡಿದೆ.
ಭವಾನಿಗೆ ಏಕೆ ನೋಟಿಸ್?
ಸಂತ್ರಸ್ತೆಯ ಅಪಹರಣ ಪ್ರಕರಣದ 2ನೇ ಆರೋಪಿ ಸತೀಶ್ ಬಾಬು ಮೊಬೈಲ್ ವಶಕ್ಕೆ ಪಡೆದು ಕರೆಗಳ ಮಾಹಿತಿ ಕಲೆ ಹಾಕಿದಾಗ, ಭವಾನಿ ರೇವಣ್ಣ ಮತ್ತು ಸತೀಶ್ ಬಾಬು ಸಂಭಾಷಣೆ ನಡೆಸಿರುವ ಸುಳಿವು ಸಿಕ್ಕಿತ್ತು. ಈ ಬಗ್ಗೆ ಮಾಹಿತಿ ಪಡೆಯಲು ಎಸ್‌ಐಟಿ ಭವಾನಿ ರೇವಣ್ಣಗೆ ಬುಲಾವ್ ನೀಡಿತ್ತು ಎನ್ನಲಾಗಿದೆ. ಆದರೆ, ಎಸ್‌ಐಟಿ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.