ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಕೇವಲ ಒಂದೇ ತಿಂಗಳು ಜೊತೆಗಿದ್ದು, 15ವರ್ಷಗಳಿಂದ ದೂರವಿದ್ದ ಪತ್ನಿಯಿಂದ 40ಲಕ್ಷ ಜೀವನಾಂಶಕ್ಕೆ ಡಿಮಾಂಡ್

Published

on

ಭಾರತದ ಕಾನೂನು, ನಿಯಮಗಳು ಸಾಧಾರಣವಾಗಿ ಹೆಣ್ಣುಮಕ್ಕಳ ಪರವಾಗಿದೆ. ಹೆಣ್ಣುಮಕ್ಕಳ ರಕ್ಷಣೆಗೆಂದು ಜಾರಿಗೆ ತಂದಿರುವ ಕಾನೂನುಗಳು ದುರುಪಯೋಗ ಆಗುತ್ತಿದೆ. ತಮ್ಮ ರಕ್ಷಣೆಗಿರುವ ಕಾನೂನನ್ನೇ ಪತಿಯ ಮನೆಯವರ ವಿರುದ್ಧ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇತ್ಯಾದಿ ಗಂಭೀರ ಆರೋಪಗಳು ಇಂದು, ನಿನ್ನೆಯದ್ದಲ್ಲ. ಎಷ್ಟೋ ಕಡೆಗಳಲ್ಲಿ ವರದಕ್ಷಿಣೆ ಕಿರುಕುಳ, ಹೆಣ್ಣಿನ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಚಿತ್ರಹಿಂಸೆ, ಪತಿಯ ಮನೆಯಲ್ಲಿ ಆಕೆ ಅನುಭವಿಸುತ್ತಿರುವ ಹೇಳಿಕೊಳ್ಳಲಾಗದ ಸಂಕಷ್ಟ ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಹೆಣ್ಣಿನ ಮಾನ, ಪ್ರಾಣ ಕಾಪಾಡಲು ಸರ್ಕಾರಗಳು ಜಾರಿಗೊಳಿಸಿರುವ ಹಲವು ಕಾನೂನುಗಳೇ ಈಗ ಪತಿಗೆ ಯಮಕುಣಿಕೆಯಾಗುತ್ತಿದೆ. ಕಾನೂನು ಕುಣಿಕೆಯಲ್ಲಿ ತಮ್ಮದಲ್ಲದ ತಪ್ಪಿಗೂ ಪತಿ ಹಾಗೂ ಆತನ ಮನೆಯವರು ಬಲಿಯಾಗುವ ಘಟನೆಗಳು ನಡೆಯುತ್ತಲೇ ಇವೆ.

ಇತ್ತೀಚೆಗೆ ಬೆಂಗಳೂರಿನ ಟೆಕ್ಕಿ ಅತುಲ್​ ಸಾವಿನ ಬೆನ್ನಲ್ಲೇ #justiceforAtul ಟ್ರೆಂಡ್ ಆಗಿರೋ ಬೆನ್ನಲ್ಲೇ ಪುರುಷರ ದನಿ ಜೋರಾಗಿ ಕೇಳಿಬರುತ್ತಿದೆ. ಅತುಲ್​ಗೆ ನ್ಯಾಯ ದೊರಕಬೇಕೆಂಬ ನಿಟ್ಟಿನಲ್ಲಿ ಕೂಗು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಮೀಡಿಯಾ ಅಟೆನ್ಷನ್​, ಜನರ ಪ್ರತಿಭಟನೆ ಎಲ್ಲಕ್ಕೂ ಮುಖ್ಯವಾಗಿ ಅತುಲ್​ ಬರೆದಿಟ್ಟಿರುವ ಸುದೀರ್ಘ ಪತ್ರ, ವೀಡಿಯೋ ರೆಕಾರ್ಡಿಂಗ್​ ಇವೆಲ್ಲವುಗಳು ಈ ಪ್ರಕರಣ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣ ಎನ್ನುವುದೇನೂ ಸುಳ್ಳಲ್ಲ. ಇಲ್ಲದಿದ್ದರೆ ಅತುಲ್​ ಸಾವು ಎಲ್ಲೋ ಒಂದೆರಡು ಕಡೆ ಸುದ್ದಿಯಾಗಿ ಮುಗಿದು ಹೋಗುವ ಕಥೆಯಾಗಿತ್ತು. ಆರೋಪಿಗಳು ತಾವು ನುಣುಚಿಕೊಂಡು, ಜಾಮೀನು ಪಡೆದುಕೊಂಡು ನೆಮ್ಮದಿಯಾಗಿ ಇರುತ್ತಿದ್ದರು. ಅತುಲ್​ ಪ್ರಕರಣ ಒಂದು ಉದಾಹರಣೆ ಮಾತ್ರ. ಇದೇ ಪ್ರಕರಣದಂತೆ ಹೆಣ್ಣು ಹಾಗೂ ಹೆಣ್ಣಿನ ಮನೆಯವರ ದೌರ್ಜನ್ಯಕ್ಕೊಳಗಾಗಿ ನೋವು ಅನುಭವಿಸುತ್ತಿರುವ ಅದೆಷ್ಟೋ ಮಂದಿ ಗಂಡಸರಿದ್ದಾರೆ. ಆದರೆ ಅವರ ಪ್ರಕರಣಗಳು ಅತುಲ್​ ಕೇಸ್​‌ನಂತೆ ಪ್ರತಿಭಟನೆಯ ಹಂತಕ್ಕೆ ಹೋಗದ ಕಾರಣ, ಇನ್ನೂ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಲೇ ಇದೆ.

ಅದೇ ರೀತಿ, ಇದೀಗ ಇನ್ನೊಂದು ಕೋರ್ಟ್​ ಕೇಸ್​ ವೈರಲ್​ ಆಗಿದೆ. ಈಗ ಕೋರ್ಟ್​ ಪ್ರೊಸೀಡಿಂಗ್ಸ್​ಗಳನ್ನು ನೇರ ಪ್ರಸಾರದಲ್ಲಿ ನೋಡಬಹುದಾಗಿರುವ ಹಿನ್ನೆಲೆಯಲ್ಲಿ, ಈ ಕೇಸಿನ ವೀಡಿಯೋ ಕೂಡ ವೈರಲ್​ ಆಗಿದೆ. ಇದು ಎಲ್ಲಿಯ ವೀಡಿಯೋ ಎಂಬುದು ಸ್ಪಷ್ಟವಾಗಿ ನಮೂದಾಗಿಲ್ಲ. ಆದರೆ ಇಂಜಿನಿಯರ್​ ಒಬ್ಬರು ತಮ್ಮ ನೋವನ್ನು ತೋಡಿಕೊಳ್ಳುವುದು, ಅವರ ಪರವಾಗಿ ವಾದಿಸುತ್ತಿರುವ ವಕೀಲರ ವಾದದಿಂದ ಈ ಕೇಸ್​ ಅನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ.

 

ಈ ಕೇಸ್​ನಲ್ಲಿ, ಒಂದೇ ತಿಂಗಳು ಅವದ ಪತ್ನಿ ಪತಿಯೊಂದಿಗೆ ಇದ್ದಳು. ಆ ಬಳಿಕ ಆಕೆ ಪತಿಯನ್ನು ತೊರೆದಿದ್ದಾಳೆ. ಆಕೆ ಪತಿಯೆ ತೊರೆದು 15 ವರ್ಷಗಳೇ ಕಳೆ಼ದಿದೆ. ಅಂದಿನಿಂದಲೂ ಪರಿಹಾರಕ್ಕಾಗಿ ಹೋರಾಟ ನಡೆಯುತ್ತಿದೆ. 15 ಲಕ್ಷ ರೂ. ಕೊಡಲು ಪತಿ ಒಪ್ಪಿಕೊಂಡಿದ್ದಾನೆ. ಆದರೆ ಆಕೆಯ ಡಿಮಾಂಡ್​ 40 ಲಕ್ಷ ರೂ. ಹಾಗೂ ಹೀಗೂ ಮಾಡಿ ಪತಿ 30 ಲಕ್ಷ ರೂ. ಕೊಡಲು ಒಪ್ಪಿದರೂ, ಆಕೆ ಸುತರಾಂ ಒಪ್ಪುತ್ತಿಲ್ಲ. 40 ಲಕ್ಷವೇ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ನಾನು 15 ಲಕ್ಷ ಕೊಡಬಹುದು. ಇದಕ್ಕಿಂತ ಹೆಚ್ಚು ದುಡ್ಡು ಕೊಡಬೇಕೆಂದರೆ ಸಾಲ ಮಾಡಬೇಕು ಎಂದು ಪತಿ, ನ್ಯಾಯಾಧೀಶರ ಮುಂದೆ ನೋವು ತೋಡಿಕೊಂಡಿದ್ದಾನೆ. ಆದರೂ 30 ಲಕ್ಷ ಕೊಡಲು ಒಪ್ಪಿಕೊಂಡೆ. ಅದಕ್ಕೆ ಆಕೆಯ ತವರಿನವರು ಒಪ್ಪುತ್ತಿಲ್ಲ. ಅವಳು ಒಂದೇ ತಿಂಗಳು ಜೊತೆಗಿದ್ದಳು, ನನಗೆ ಇಷ್ಟು ಹಣ ಕೊಡಲು ಆಗುತ್ತಿಲ್ಲ ಎಂದಿದ್ದಾನೆ. 

 

ಕೊನೆಗೆ ನ್ಯಾಯಾಧೀಶರು ವಕೀಲರಲ್ಲಿ ಎರಡೂ ಕಡೆಯವರು ಕೂತು ಸೆಟಲ್​ಮೆಂಟ್​  ಮಾಡಿಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ ಸುರಿಮಳೆಯಾಗುತ್ತಿದೆ. ನಾನೇನಾದರು ನ್ಯಾಯಾಧೀಶನ ಸ್ಥಾನದಲ್ಲಿ ಇದ್ದಿದ್ದರೆ, ಒಂದು ಕಾಸು ಕೂಡ ಪರಿಹಾರ ಕೊಡಬೇಡ ಎಂದು ಆದೇಶಿಸುತ್ತಿದ್ದೆ ಎಂದು ಕೆಲವರು ಬರೆದುಕೊಂಡಿದ್ದರೆ, ಅತುಲ್​ ಕೇಸ್​ ಬಗ್ಗೆ ಮಾತನಾಡಿರುವ ಕೆಲವರು, ನ್ಯಾಯಾಧೀಶರು ಹೇಗೆ ಲಂಚ ಕೇಳುವ ಪ್ರಸಂಗದ ಬಗ್ಗೆ ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಪರಿಹಾರ ಎನ್ನುವುದು ಹೆಣ್ಣುಮಕ್ಕಳಿಗೆ ವ್ಯವಹಾರ ಆಗಿದೆ ಎಂಬುದಾಗಿ ಹಲವರು ಹೇಳುತ್ತಿದ್ದಾರೆ! 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version