Connect with us

ಅಭಿವೃದ್ಧಿ ಕಾರ್ಯಗಳು

40 ವರ್ಷಗಳ ಕರ್ಕುಂಜ ನೆಲ್ಲಿಗುಂಡಿ ದಲಿತ ಕಾಲನಿ ಸಂಪರ್ಕ ರಸ್ತೆ ತಕರಾರು…. 4 ಗಂಟೆಯಲ್ಲಿ ಪರಿಹಾರ…..!! ಜನರ ಸಮಸ್ಯೆ ಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿದ್ದೇನೆ : ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು:ಪುತ್ತೂರು ಕಸಬಾ ಗ್ರಾಮದ ಕರ್ಕುಂಜ ಬಪ್ಪಳಿಗೆಯ ನೆಲ್ಲಿಗುಂಡಿಯಲ್ಲಿ ದಲಿತ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದಕ್ಕೆ ಕಾಂಕ್ರಿಟೀಕರಣ ಮಾಡಲು ಸಿದ್ಧತೆ ನಡೆಸುವ ಸಂದರ್ಭ, ತನ್ನ ವರ್ಗ ಜಾಗದಲ್ಲಿ ರಸ್ತೆ ಕಾಂಕ್ರಿಟೀಕರಣ ಮಾಡುತ್ತಿದ್ದಾರೆಂದು ಹೇಳಿ ಸ್ಥಳೀಯರೊಬ್ಬರು ವಿರೋಧ ವ್ಯಕ್ತಪಡಿಸಿದ ಮತ್ತು ತಮಗೆ ಸಾರ್ವಜನಿಕ ರಸ್ತೆ ಸಂಪರ್ಕ ಕೊಡಿಸುವಂತೆ ಸ್ಥಳೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕೆಲವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೇ 4ರಂದು ನಡೆದಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು, ವರ್ಗ ಜಾಗವೆಂದು ಕಾಮಗಾರಿಗೆ ಆಕ್ಷೇಪಿಸಿದವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.ಈ ನಡುವೆಯೇ ಸಾರ್ವಜನಿಕರು ಸೇರಿ ತೆಂಗಿನ ಕಾಯಿ ಒಡೆದು ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಿದ ಘಟನೆಯೂ ನಡೆದಿದೆ.

ಪುತ್ತೂರು ಕಸಬಾ ಗ್ರಾಮದ ಕರ್ಕುಂಜ ಬಪ್ಪಳಿಗೆಯ ನೆಲ್ಲಿಗುಂಡಿಯಲ್ಲಿ ಹಲವಾರು ವರ್ಷಗಳಿಂದ ಇರುವ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಕಾಲನಿ ನಿವಾಸಿಗಳು ಶಾಸಕರಿಗೆ ಮನವಿಯೊಂದನ್ನು ನೀಡಿ,ಈ ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಕೋರಿಕೊಂಡಿದ್ದರು. ಅದರಂತೆ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರ ಅನುದಾನ ಮಂಜೂರಾಗಿತ್ತಲ್ಲದೆ, ನಗರ ಸಭಾ ವತಿಯಿಂದ ನಿರಾಪೇಕ್ಷಣ ಪತ್ರ ನೀಡಿರುತ್ತಾರೆ,ಇದರ ಮುಖಾಂತರ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆಸಲು ಮೇ 5ರಂದು ಬೆಳಗ್ಗೆ ಜೆಸಿಬಿ ತಂದು ಪೊಲೀಸ್ ಬಂದೋಬಸ್ತ್ನಲ್ಲಿ ಕಾಮಗಾರಿಗೆ ಸಿದ್ಧತೆ ನಡೆಸಲಾಗಿತ್ತು.

ಇದು ನನ್ನ ವರ್ಗ ಜಾಗವೆಂದು ಕಾಮಗಾರಿಗೆ ತಡೆ: ಕಾಮಗಾರಿಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ಥಳೀಯ ಪುರಂದರ ಗೌಡ ಎಂಬವರು ಸ್ಥಳಕ್ಕೆ ಆಗಮಿಸಿ, ಇದು ನನ್ನ ಜಾಗ ಎಂದು ಹೇಳಿದರು,ಈ ವೇಳೆ ಅವರು ಮತ್ತು ಸ್ಥಳೀಯ ಕಾಲನಿ ನಿವಾಸಿಗಳ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ,ಎಸ್ .ಐ.ಆಂಜನೇಯ ರೆಡ್ಡಿ,ಎಸ್.ಐ ಸೇಸಮ್ಮ, ಗಂಗಾಧರ್ ಅವರು ಎರಡೂ ಕಡೆಯವರಲ್ಲಿ ಮಾತುಕತೆ ನಡೆಸಿದರು.ಆದರೆ ಅದು ಫಲಕಾರಿಯಾಗಲಿಲ್ಲ. ಇದೇ ವೇಳೆ ಅಲ್ಲಿಗೆ ಪುರಂದರ ಗೌಡ ಅವರ ಪರ ವಕೀಲ ದಿವಾಕರ ಕೆ.ನಿಡ್ಡಣ್ಣಾಯ ಅವರು ಆಗಮಿಸಿದರು. ಅವರು, ಮಾನವೀಯ ನೆಲೆಯಲ್ಲಿ ಅವರು ಜಾಗ ಬಿಡುವುದಾದರೆ ಅಡ್ಡಿಯಿಲ್ಲ.ಈ ನಿಟ್ಟಿನಲ್ಲಿ ಸಂಬಂಧಿಸಿದವರು ಇವತ್ತು ಸಂಜೆ ಗಂಟೆ 4ಕ್ಕೆ ಪುರಂದರ ಅವರ ಮನೆಗೆ ಬಂದು ಮಾತನಾಡುವಂತೆ ವಿನಂತಿಸಿದರು. ಆದರೆಸಂಜೆ ಮಾತನಾಡುವುದಕ್ಕಿಂತ ಈಗಲೇ ಮಾತನಾಡುವುದು ಒಳಿತು ಎಂದರು. ಮೇ 6 ಮತ್ತು 7ಕ್ಕೆ ಇದೇ ರಸ್ತೆಯಲ್ಲಿ ನಮ್ಮ ದೇವರು ಬರಲಿದ್ದಾರೆ. ಅದರ ಮೊದಲು ನಮಗೆ ಕೆಲಸ ಆಗಬೇಕು ಎಂದು ಸ್ಥಳೀಯ ಕಾಲನಿ ನಿವಾಸಿಗರು ಹೇಳಿದರು.

ನೆಲ್ಲಿಗುಂಡಿ ಭಾಗದಲ್ಲಿ ರಸ್ತೆಯ ಬೇಡಿಕೆ ಹಲವು ವರ್ಷಗಳ ಹಿಂದಿನದು.ಯಾರೆಲ್ಲ ಶಾಸಕರಾಗಿದ್ದರೋ ಅವರಿಗೆಲ್ಲ ಈ ಕುರಿತು “ಅಲ್ಲಿನವರು ಮನವಿ ನೀಡಿದ್ದಾರೆ.ಯಾವುದೇ ಫಲ ಸಿಗಲಿಲ್ಲ.ನಾನು ಶಾಸಕನಾಗುವ ಮೊದಲೇ ನನಗೆ ಮನವಿ ಮಾಡಿದ್ದರು. ಆಗ ನಾನು, ಚುನಾವಣೆಯಲ್ಲಿ ಸಹಕರಿಸಿದರೆ ಖಂಡಿತವಾಗಿಯೂ ರಸ್ತೆ ಮಾಡಿಕೊಡುತ್ತೇನೆಂದು ಭರವಸೆ ನೀಡಿದ್ದೆ.ಅದರಂತೆ ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ನೀಡಲಾಗಿದೆ. ರಸ್ತೆಗಾಗಿ ಮೂರು ಮನೆಯವರ ವಿರೋಧವಿತ್ತು.ಅವರಲ್ಲಿ ಇಬ್ಬರನ್ನು ಮನವೊಲಿಸುವಲ್ಲಿ ಯಶಸ್ವಿಯಾದೆ. ರಸ್ತೆ ಬಿಟ್ಟುಕೊಡಲು ಒಪ್ಪದ ವ್ಯಕ್ತಿ ಜೊತೆ ಮೂರು ಬಾರಿ ಮೀಟಿಂಗ್ ಮಾಡಿದೆ. ಒಮ್ಮೆ ಕೊಡುತ್ತೇನೆಂದು ಹೇಳಿದ್ದ ಅವರು ಮತ್ತೊಮ್ಮೆ ಯಾವುದೇ ಉತ್ತರ ನೀಡಿಲ್ಲ.ಆದರೆ ಆ ರಸ್ತೆಯಲ್ಲಿ ಸುಮಾರು 500 ಜನರು ಹೋಗುತ್ತಾರೆ.ಸುಮಾರು 100 ಮನೆಯಿದೆ. ಅವರಿಗಾಗಿ ರಸ್ತೆ ಕೊಡಲೇ ಬೇಕು.ಈ ನಿಟ್ಟಿನಲ್ಲಿ ರಸ್ತೆ ಬಿಟ್ಟುಕೊಟ್ಟವರಿಗೆ ಸರಕಾರದಿಂದ ಮತ್ತು ನಗರಸಭೆಯಿಂದ ಪರಿಹಾರ ನೀಡಲಾಗುವುದು. ಇವತ್ತು ರಸ್ತೆ ನಿರ್ಮಾಣ ಆಗಿರುವುದು ನನಗೆ ಸಂತೋಷದ ದಿನವಾಗಿದೆ.

ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಯಶೋದಾ ಹರೀಶ್, ನಗರಸಭೆ ಕಂದಾಯ ನಿರೀಕ್ಷಕ ರಾಜೇಶ್ ನ್ಯಾಕ್, ದಲಿತ ಸಂಘಟನೆಯ ಪ್ರಮುಖರು ಸೇರಿದಂತೆ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

ಕೊನೆಗೂ ಕೆಲಸಕ್ಕೆ ಚಾಲನೆ: ‘ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೇ ಮಧ್ಯಾಹ್ನದ ವೇಳೆ ಸ್ಥಳೀಯರು ಸೇರಿ ದಿಢೀರ್ ತೆಂಗಿನ ಕಾಯಿ ಒಡೆದು ಕೆಲಸಕ್ಕೆ ಚಾಲನೆ ನೀಡಿದರು.ಜೆಸಿಬಿ ಮೂಲಕ ಮತ್ತು ಕೆಲವರು ಕೊಟ್ಟು ಪಿಕ್ಕಾಸ್ ಹಿಡಿದು ಮಣ್ಣು ಅಗೆತ ಕೆಲಸ ಮಾಡಿದರು.ಬಳಿಕ ಜಲ್ಲಿ ಸುರಿದು ಕಾಂಕ್ರಿಟೀಕರಣ ಕೆಲಸಕ್ಕೆ ಚಾಲನೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version