Connect with us

ಇತ್ತೀಚಿನ ಸುದ್ದಿಗಳು

ಬದುಕು ಬಂಗಾರವಾಗಲಿ ಎಂದು ಹಾರೈಸೋಣ, ಸ್ವ ಪ್ರತಿಷ್ಠೆ, ರಾಜಕೀಯಕ್ಕೆ, ಪ್ರಚಾರಕ್ಕೆ ಇನ್ನೊಬ್ಬರ ಬದುಕನ್ನು ಬಲಿ ಕೊಡದಿರೋಣ – ಶಾಸಕ ಅಶೋಕ್ ರೈ ಯವರಿಂದ ಮನ ಮುಟ್ಟುವ ಸ್ಪಷ್ಟೀಕರಣ.

Published

on

ಸ್ವತ ಹೆಣ್ಣು ಮಕ್ಕಳ ತಂದೆಯಾಗಿರುವ ನನಗೆ ಈ ಸಂತ್ರಸ್ತ ಹೆಣ್ಣುಮಗುವಿನ ಮೇಲೆ ಕಾಳಜಿ ಇರುವುದಿಲ್ಲವೇ..? ಆ ಹೆಣ್ಣು ಮಗುವಿನ ಭವಿಷ್ಯದ ಬಗ್ಗೆ ಚಿಂತೆ ಇರುವುದಿಲ್ಲವೇ…? ಕೇವಲ ಆ ಸಂತ್ರಸ್ತ ಹೆಣ್ಣುಮಗಳು ಅಷ್ಟೇ ಅಲ್ಲವಲ್ಲ…. ಆಕೆಯ ಹೊಟ್ಟೆಯೊಳಗೆ ಬೆಳೆಯುತ್ತಿರುವ ಪುಟ್ಟ ಕಂದನ ಭವಿಷ್ಯದ ಬಗ್ಗೆಯೂ ಯೋಚಿಸಬೇಕಲ್ಲ..? ಒಂದು ವೇಳೆ ಹುಡುಗನೋ, ಆತನ ಮನೆಯವರೋ ಈ ಸಂತ್ರಸ್ತ ಹುಡುಗಿಯ ಮದುವೆಯ ಬಗ್ಗೆ ಒಪ್ಪದೆಯೇ ಹೋಗಿದ್ದರೆ, ಆ ಸಂದರ್ಭದಲ್ಲಿ ನಾನೇ ಮುಂದಾಗಿ ಹುಡುಗಿಯ ಮನೆಯವರ ಜೊತೆಗೆ ನಿಂತು ಕೇಸು ದಾಖಲಿಸುವುದಕ್ಕೆ ಬೆಂಬಲವನ್ನೂ ಸೂಚಿಸುತ್ತಿದ್ದೆ. ಆದರೆ ಆಗ ಪರಿಸ್ಥಿತಿ ಹಾಗಿರಲಿಲ್ಲ… ಹುಡುಗನ ತಂದೆ ನನಗೆ ಮದುವೆ ಮಾಡಿಸುವ ಬಗ್ಗೆ ಮಾತು ಕೊಟ್ಟಿದ್ದರು. ಈ ಸಂದರ್ಭದಲ್ಲೇನಾದರೂ ಹುಡುಗಿ ಮನೆಯವರು ಕೇಸು ದಾಖಲಿಸಿದ್ದೇ ಆದರೆ, ಆಗ ಎರಡೂ ಮನೆಯವರ ಮಧ್ಯೆ ವೈಮನಸ್ಸು ಮೂಡಿ ನಡೆಯಬಹುದಾಗಿದ್ದ ಈ ಮದುವೆಯೇ ನಿಂತು ಹೋಗಬಹುದು ಎಂಬ ಕಾಳಜಿ ನನಗಿತ್ತು. ಒಂದು ವೇಳೆ ಹಾಗಾದಲ್ಲಿ ಹುಡುಗಿಯ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಪುಟ್ಟ ಕಂದನ ಭವಿಷ್ಯ ಏನು..? ಕಾನೂನು ಹೋರಾಟ ಮಾಡಿದರೆ ಸಿಗುವ ಪರಿಹಾರ ಏನು….? ಈ ಪ್ರಕರಣ “ಕಾನೂನಿನ ಪ್ರಕಾರವೇ ಪರಿಹಾರ, ದಂಡ, ತಪ್ಪಿತಸ್ಥನಿಗೆ ಶಿಕ್ಷೆ” ಎಂಬ ರೀತಿಯಲ್ಲಿ ಬಗೆಹರಿದರೂ ಕೂಡಾ ಆ ಸಂತ್ರಸ್ತ ಹುಡುಗಿಯ ಬಾಳು ಸರಿಯಾಗುವುದಿಲ್ಲ… ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ಭವಿಷ್ಯ ಚೆನ್ನಾಗಿರುವುದಿಲ್ಲ…. ಎಂಬ ಅರಿವು ನನಗಿತ್ತು. ಹಾಗಾಗಿ ಇದೆಲ್ಲವೂ ಸೌಹಾರ್ದಯುತವಾಗಿ ಪರಿಹಾರವಾಗಲಿ ಎಂಬುದೇ ನನ್ನ ಕಳಕಳಿಯಾಗಿತ್ತು.


ಅಂದ ಹಾಗೆ ಹುಡುಗನ ತಂದೆ ನನ್ನಲ್ಲಿ ಯಾವುದೆಲ್ಲಾ ಭರವಸೆಗಳನ್ನು ನೀಡಿದ್ದರೋ ಅವುಗಳನ್ನೆಲ್ಲಾ ಪೊಲೀಸ್ ಠಾಣೆಗೆ ನೀಡಿದ್ದ ಮುಚ್ಚಳಿಕೆ ಪತ್ರದಲ್ಲೂ ಬರೆದಿದ್ದರಲ್ಲ… ಹಾಗಾಗಿ ನಾನು ಕೊಂಚ ನಿರಾಳನಾದೆ. ಈ ಪ್ರಕರಣ ಸುಸೂತ್ರವಾಗಿ, ಸೌಹಾರ್ದಯುತವಾಗಿ ಬಗೆ ಹರಿಯಿತು ಅಂತಲೇ ಅಂದುಕೊಂಡೆ. ನಿಜಕ್ಕಾದರೆ ಇಂಥಹಾ ವೈಯುಕ್ತಿಕ ನೆಲೆಯ ಪ್ರಕರಣವೊಂದರಲ್ಲಿ ಊರಿನ ಶಾಸಕನಾಗಿ ನಾನು ವಹಿಸಬೇಕಾಗಿದ್ದ ಪಾತ್ರ ತೀರಾ ನಗಣ್ಯವಾಗಿತ್ತು. ಆದರೆ ಹುಡುಗನ ತಂದೆ ಓರ್ವ ಸ್ಥಳೀಯ ಜನ ಪ್ರತಿನಿಧಿ ಆಗಿದ್ದುದರಿಂದ, ವೈಯುಕ್ತಿಕವಾಗಿ ನನಗೆ ಪರಿಚಯಸ್ಥರೂ ಆದುದರಿಂದ ಮತ್ತು ಅವರಾಗಿಯೇ ಈ ಬಗ್ಗೆ ನನ್ನನ್ನು ಸಂಪರ್ಕಿಸಿ ಸಹಾಯ ಯಾಚಿಸಿದ್ದರಿಂದ ( ಅವರು ರಾಜಕೀಯವಾಗಿ ನನ್ನ ಎದುರಾಳಿ ಪಕ್ಷದವರಾಗಿದ್ದರೂ ಕೂಡಾ) ನಾನು ಮಾನವೀಯ ನೆಲೆಯಲ್ಲಷ್ಟೇ ಸಲಹೆ ನೀಡಿದ್ದೆ. ಏನೇ ಆದರೂ, ಆ ಹೊತ್ತಿಗೆ ಪೊಲೀಸ್ ಕೇಸು ದಾಖಲಾಗಲಿಲ್ಲ ಎಂಬುದನ್ನು ಹೊರತು ಪಡಿಸಿ ನನ್ನಿಂದಾಗಿ ಈ ಪ್ರಕರಣದಲ್ಲಿ ಬೇರೆ ಏನೂ ವ್ಯತ್ಯಾಸಗಳಾಗಿರಲಿಲ್ಲ… ಒಂದು ವೇಳೆ ಹುಡುಗನಿಂದ ಮತ್ತು ಆತನ ಮನೆಯವರಿಂದ ಯಾವುದೇ ರೀತಿಯ ತೊಂದರೆ, ನಂಬಿಕೆ ದ್ರೋಹವಾದರೂ ಸಂತ್ರಸ್ತೆ ಮತ್ತಾಕೆಯ ಮನೆಯವರಿಗೆ ಕಾನೂನು ಪ್ರಕಾರ ಹೋರಾಟ ಮುಂದುವರಿಸುವ ಮತ್ತು ಪೊಲೀಸ್ ದೂರು ದಾಖಲಿಸುವ ಅವಕಾಶಗಳಂತೂ ಖಂಡಿತಾ ಇದ್ದೇ ಇತ್ತು. ಅದಕ್ಕೆ ಬೆಂಬಲವಾಗಿ ಹುಡುಗನ ತಂದೆಯೇ ಪೊಲೀಸ್ ಠಾಣೆಯಲ್ಲಿ ಬರೆದುಕೊಟ್ಟ ಮುಚ್ಚಳಿಕೆ ಪತ್ರವಿತ್ತು.


ಆದರೆ ಈಗ ಪ್ರಕರಣದಲ್ಲಿ ಒಂದಷ್ಟು ಆತಂಕಕ್ಕೆ ಎಡೆಮಾಡಿಕೊಡುವ ಬೆಳೆವಣಿಗೆಗಳು ನಡೆದಿವೆ. ಆರೋಪಿ ಸ್ಥಾನದಲ್ಲಿದ್ದ ಹುಡುಗ ನಾಪತ್ತೆಯಾಗಿದ್ದಾನೆ. ಸಂತ್ರಸ್ತ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ, ಮತ್ತು ಹುಡುಗನ ಮನೆಯವರು ಮದುವೆಗೆ ನಿರಾಕರಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹುಡುಗಿಯ ಮನೆಯವರು ಪೊಲೀಸ್ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿಯೇ ಈ ಪ್ರಕರಣದಲ್ಲಿ ಹೊಲಸು ರಾಜಕಾರಣ ಶುರುವಾಯಿತು. ಅಪಕ್ವ ಮನಸ್ಸಿನ ಹುಡುಗ ಹುಡುಗಿಯರಿಬ್ಬರ ನಡುವಿನ ಪ್ರೀತಿ- ಪ್ರೇಮದ ಪ್ರಕರಣವೊಂದು ಹೀಗೆ ಅಸಹ್ಯ ಮಟ್ಟದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಬಹುದೆಂದು ನಾನು ಊಹಿಸಿಯೇ ಇರಲಿಲ್ಲ…. ನನ್ನ ಹೆಸರನ್ನೂ ವಿನಾಕಾರಣ ಎಳೆದು ತರಲಾಯಿತು. ಸಂತ್ರಸ್ತೆಗೆ ನಾನು ನ್ಯಾಯ ಒದಗಿಸಲಿಲ್ಲ… ಆ ನೊಂದ ಕುಟುಂಬದ ಪರವಾಗಿ ನಿಲ್ಲಲಿಲ್ಲ ಎಂಬಂತಹ ರೀತಿಯ ಆರೋಪಗಳೂ ಬಂದವು. ನನ್ನ ಮನಸ್ಸಿಗೆ ತುಂಬಾ ಖೇದವಾಯಿತು. ಆದರೆ ಈಗ ಈ ಪ್ರಕರಣವನ್ನು ಮಾತುಕತೆಯ ಮೂಲಕ ಪರಿಹರಿಸುವುದು ಕಷ್ಟವೇ, ಬದಲಿಗೆ ಕಾನೂನು ಮುಖಾಂತರವೇ ಪರಿಹಾರ ಕಂಡುಕೊಳ್ಳಬೇಕಾಗಿರುತ್ತದೆ ಎಂಬುದು ನನ್ನ ಅನಿಸಿಕೆ. ಈಗಾಗಲೇ ಎಸ್ ಪಿ, ಡಿ ವೈ ಎಸ್ ಪಿ ಯವರ ಜೊತೆ ಖುದ್ದು ಮಾತಾಡಿದ್ದೇನೆ. ನಾನು ಯಾವತ್ತಿದ್ದರೂ ಆ ಸಂತ್ರಸ್ತ ಹುಡುಗಿಯ ಪರವೇ, ಆ ಕುಟುಂಬದ ಪರವೇ ಇರುತ್ತೇನೆ. ಅವರಿಗೆ ಏನೇ ಸಹಾಯ ಬೇಕಿದ್ದರೂ ನನ್ನ ಕೈಯಲ್ಲಾದ ರೀತಿಯಲ್ಲಿ ಖಂಡಿತಾ ಮಾಡುತ್ತೇನೆ. ಇಲ್ಲಿ ನಾನು ವೈಯುಕ್ತಿವಾಗಿ ಹೇಳಲು ಬಯಸುವುದು ಇಷ್ಟೇ. ಸಂತ್ರಸ್ತ ಹೆಣ್ಣಿನ ಬದುಕು ಹಾಳಾಗಬಾರದು, ಬದಲಿಗೆ ಜೀವನ ಬಂಗಾರವಾಗಬೇಕು…

ಇನ್ನು ಪುತ್ತೂರಿನ ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಸಂತ್ರಸ್ತ ಯುವತಿಯ ಕುಟುಂಬಕ್ಕೆ ನನ್ನ ಸಂಪೂರ್ಣ ಬೆಂಬಲ, ಸಹಕಾರ ಇದೆ. ನಾನು ಶಾಸಕನ ನೆಲೆಯಲ್ಲೂ, ವೈಯುಕ್ತಿಕವಾಗಿಯೂ ಬಹಳ ದೃಢವಾಗಿ ಆ ಸಂತ್ರಸ್ತ ಕುಟುಂಬದ ಹಿಂದೆ ಇದ್ದೇನೆ. ಸಧ್ಯಕ್ಕೆ ಎದುರಾಗಿರುವ ಈ ಗಂಭೀರ ಸಮಸ್ಯೆಗೆ ಒಂದು ತಾರ್ಕಿಕವಾದ ಮತ್ತು ಶಾಶ್ವತವಾದ ಪರಿಹಾರ ಒದಗಿಸಿಕೊಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ಆ ಹೆಣ್ಣುಮಗುವಿನ ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ಮಾಡಲು ನಾನು ಸದಾ ಸಿದ್ಧ. ಎಂಥದ್ದೇ ಸಂದರ್ಭ ಬಂದರೂ, ಯಾವುದೇ ಸಮಸ್ಯೆ ಎದುರಾದರೂ ಆ ಕುಟುಂಬ ಯಾವುದೇ ಹಿಂಜರಿಕೆಯಿಲ್ಲದೆಯೇ ನನ್ನನ್ನು ಸಂಪರ್ಕಿಸಬಹುದು.

ಕಳೆದ ಎರಡು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಹಲವು ಅಸಹಾಯಕರ ಕಷ್ಟಕ್ಕೆ ಸ್ಪಂದಿಸುತ್ತಿರುವ ನನಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೀಡುತ್ತಿರುವ ಉಚಿತ ಸಲಹೆಗಳ ಅಗತ್ಯವಿಲ್ಲ. ಹೆಣ್ಣು ಮಕ್ಕಳ ಕಷ್ಟವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. “ಎಲ್ಲರ ಬಳಿ ನನ್ನದೊಂದು ವಿನಂತಿ: ರಾಜಕೀಯಕ್ಕಾಗಿ, ಸ್ವ ಪ್ರತಿಷ್ಠೆಗಾಗಿ, ಪ್ರಚಾರಕ್ಕಾಗಿ ಇಂತಹ ಪ್ರಕರಣವನ್ನು ಬಳಸಿಕೊಳ್ಳಬೇಡಿ. ಸಂತ್ರಸ್ತೆ ಹೆಣ್ಣು ಮಗಳ ಭವಿಷ್ಯ ಬಂಗಾರವಾಗಲಿ ಎಂದು ಹಾರೈಸೋಣ. ಸಾಮಾಜಿಕ ಮಾಧ್ಯಮಗಳಲ್ಲಿ ಸುಖಾ ಸುಮ್ಮನೆ ಪ್ರಕರಣದ ಪರ ವಿರೋಧ ಚರ್ಚೆಗಳಿಂದ ಸಂತ್ರಸ್ತೆಗೆ ಇನ್ನಷ್ಟು ಮಾನಸಿಕ ಹಿಂಸೆ ಕೊಡುವುದು ಬೇಡ. ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ ವನ್ನು”.

ಅಂದ ಹಾಗೆ ನಾನು ರಾಜಕೀಯಕ್ಕೆ ಬಂದ ಉದ್ದೇಶವನ್ನು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ನನ್ನ ಗುರಿಯೇನಿದ್ದರೂ ಅಭಿವೃದ್ಧಿ ಮಾತ್ರ… ಹಾಗಾಗಿ ಅವಕಾಶವಾದೀ ರಾಜಕೀಯ ಕೆಸರೆರಚಾಟದಲ್ಲಿ ನನಗೆ ನಂಬಿಕೆ ಇಲ್ಲ… ಸಾರ್ವಜನಿಕ ಬದುಕಿನಲ್ಲಿ ನಾನ್ಯಾವತ್ತೂ ನನ್ನ ಆತ್ಮಸಾಕ್ಷಿಗೆ ಅನುಸಾರವಾಗಿಯೇ ನಡೆದುಕೊಂಡಿದ್ದೇನೆ. ಇನ್ನು ಮುಂದೆಯೂ ಹಾಗೆಯೇ ಇರುತ್ತೇನೆ.

ಅಶೋಕ್ ಕುಮಾರ್ ರೈ
ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version