Published
5 months agoon
By
Akkare News
ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳುವಾಗಿರುವ ಘಟನೆ ಬೆನ್ನಲ್ಲೇ ಗುರುವಾಯೂರ್ನಲ್ಲೂ ನಡೆದಿರುವುದು ಬೆಳಕಿಗೆ ಬಂದಿದೆ. 18 ದೇವಸ್ಥಾನಗಳನ್ನು ನಿರ್ವಹಿಸುವ ಗುರುವಾಯೂರ್ ದೇವಸ್ವಾಮ್ ಮಂಡಳಿಯ ಆಡಿಟಿಂಗ್ ವೇಳೆ ಇದು ಬೆಳಕಿಗೆ ಬಂದಿದೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಬೆಲೆ ಬಾಳುವ ವಸ್ತುಗಳ ಲೆಕ್ಕ ಸಿಕ್ಕಿಲ್ಲ ಎನ್ನಲಾಗಿದೆ.

ತಿರುವನಂತಪುರಂ, : ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳುವಾಗಿರುವ ಘಟನೆ ಹಿಂದೂ ಧಾರ್ಮಿಕ ಭಕ್ತರಿಗೆ ಆಘಾತ ಕೊಟ್ಟ ಘಟನೆ ಮಾಸುವ ಮುನ್ನವೇ ಕೇರಳದ ಮತ್ತೊಂದು ದೇವಸ್ಥಾನದಲ್ಲಿ ಅಂತಹುದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಬಹಳ ಜನಪ್ರಿಯವಾದ ಗುರುವಾಯೂರ್ ದೇವಸ್ಥಾನಗಳಲ್ಲಿ (Guruvayur temple) ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಕೇರಳದಲ್ಲಿ 12 ದೇವಸ್ಥಾನಗಳ ಆಡಳಿತ ನಿಭಾಯಿಸುವ ಗುರುವಾಯೂರ್ ದೇವಸ್ವಾಮ್ ಮಂಡಳಿಯ ಆಡಿಟಿಂಗ್ ವೇಳೆ ಸಾಕಷ್ಟು ವ್ಯತ್ಯಯಗಳು ಪತ್ತೆಯಾಗಿವೆ. 2019ರಲ್ಲಿ ಮಾಡಲಾದ ಆಡಿಟಿಂಗ್ನಲ್ಲಿ ಕೆಲ ಗಮನಾರ್ಹ ಸಂಗತಿಗಳು ಬೆಳಕಿಗೆ ಬಂದಿವೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಹಲವು ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಗೋಲ್ಡ್ ಸ್ಕೀಮ್ನಲ್ಲಿ ಇರಲಾಗಿದ್ದ ಠೇವಣಿಗಳಿಂದ 79 ಲಕ್ಷ ರೂ ನಷ್ಟವಾಗಿರುವುದನ್ನು ತೋರಿಸಲಾಗಿದೆ.
2019-20 ಮತ್ತು 2020-21ರ ಅವಧಿಯಲ್ಲಿ ಗುರುವಾಯೂರ್ ದೇವಸ್ವಾಮ್ನ ಆಡಿಟಿಂಗ್ ಅನ್ನು ಸರ್ಕಾರದಿಂದ ನಡೆಸಲಾಗಿತ್ತು. ಅದರ ವರದಿಯು ಈಗ ಬೆಳಕಿಗೆ ಬಂದಿದೆ. ಆದಾಯ ಮತ್ತು ವೆಚ್ಚದ ಲೆಕ್ಕದಲ್ಲಿ ವ್ಯತ್ಯಾಸ ಗೊತ್ತಾಗಿದೆ. ಚಿನ್ನ, ಬೆಳ್ಳಿ ಇತ್ಯಾದಿ ಬೆಲೆಬಾಳುವ ವಸ್ತುಗಳ ಪರಿಶೀಲನೆಯನ್ನು ಸರಿಯಾಗಿ ನಡೆಸಲಾಗಿಲ್ಲ ಎಂಬುದು ಗೊತ್ತಾಗಿದೆ. ಒಟ್ಟಾರೆ 25 ಕೋಟಿ ರೂ ಮೊತ್ತದ ವಸ್ತುಗಳಿಗೆ ಲೆಕ್ಕ ಸಿಕ್ಕಿಲ್ಲ ಎನ್ನಲಾಗಿದೆ.
ಗುರುವಾಯೂರ್ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವುದು ಹಾಗೂ ಆಡಳಿತ ನಿರ್ವಹಣೆ ಸರಿಯಾಗಿ ಆಗದೇ ಇರುವುದು ಸೋಷಿಯಲ್ ಮೀಡಿಯಾದಲ್ಲಿ ಕೆಲವರಿಂದ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಕೇರಳದ ಎಡಪಂಥೀಯ ಸರ್ಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಪ್ರದೀಪ್ ಭಂಡಾರಿ ಎನ್ನುವವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.




