Published
3 months agoon
By
Akkare News
ಬೆಂಗಳೂರು, ನವೆಂಬರ್ 26: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿ ಜತೆಗೆ ಏನೇನು ಮಾತುಕತೆ ನಡೆಯಿತು ಎಂಬ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷವನ್ನು 2028 ಹಾಗೂ 2029 ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಕಾರ್ಯತಂತ್ರದ ಬಗ್ಗೆ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ನಾನು ಪಕ್ಷದ ಅಧ್ಯಕ್ಷ, ಸತೀಶ್ ಜಾರಕಿಹೊಳಿ ಅವರು ಪಕ್ಷದ ಕಾರ್ಯಾಧ್ಯಕ್ಷರು. ಜೊತೆಗೆ ನಾವಿಬ್ಬರು ಆತ್ಮೀಯ ಸ್ನೇಹಿತರು. ಇಬ್ಬರ ಬಾಂಧವ್ಯ ಚೆನ್ನಾಗಿದೆ. ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಮತ್ತು ಸತೀಶ್ ಇಬ್ಬರೂ ಪ್ರಸ್ತುತ ಒಂದೇ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಸತೀಶ್ ಜಾರಕಿಹೊಳಿ ಅವರು ಪಕ್ಷದ ದೊಡ್ಡ ಆಸ್ತಿ. ನಾವು ನಮ್ಮ ಕೆಲಸ ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಮಿಕ್ಕ ಸಮಯದಲ್ಲಿ ಏನೇನು ಕೆಲಸಗಳನ್ನು ಮಾಡಬೇಕು ಎಂದು ಚರ್ಚೆ ನಡೆಸಲಾಗಿದೆ. ಇದು ಬಿಟ್ಟರೆ ಮಾತುಕತೆಯಲ್ಲಿ ಬೇರೆ ವಿಶೇಷತೆ ಏನಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ, ಡಿಸಿಎಂ ಬಣವಿದೆ ಎನ್ನುವ ಚರ್ಚೆಯ ಕುರಿತು ಮಾತನಾಡಿ, ನನ್ನದು ಯಾವುದೇ ಬಣವಿಲ್ಲ. ಒಂದು ಬಣವಿದೆ, ಅದು ‘ಕಾಂಗ್ರೆಸ್ ಬಣ’. ನನ್ನ ಸಂಖ್ಯೆ 140. ಸಾಮೂಹಿಕ ನಾಯಕತ್ವದಲ್ಲಿ ಈ ಪಕ್ಷವನ್ನು ಕಟ್ಟಲಾಗಿದೆ. ಪಕ್ಷಕ್ಕೆ ನಾನೊಬ್ಬನೆ ದುಡಿದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ, ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ಶಾಸಕರ ಶ್ರಮದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದೇವೆ. ಇದನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಹಾಗೂ ನಾನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದರು.
ಎರಡೂವರೆ ವರ್ಷ ನಿಮಗೆ ಮೀಸಲಿಟ್ಟಿರುವ ಸಮಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ. ಅದನ್ನೆಲ್ಲಾ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ನಮ್ಮನ್ನು ಗುರುತಿಸಿದೆ. ನಾನು, ಸಿದ್ದರಾಮಯ್ಯ ಅವರು ಹಾಗೂ ಪಕ್ಷದ ಎಲ್ಲಾ ಸಚಿವರು, ಶಾಸಕರು, ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಎಲ್ಲ ಚುನಾವಣೆಯಲ್ಲೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಹುದ್ದೆ ಅಥವಾ ಉನ್ನತ ಅಧಿಕಾರ ಮುಖ್ಯವಲ್ಲ. ಪಕ್ಷದ ಎಲ್ಲರೊಡನೆ ಒಟ್ಟಾಗಿ ಕೆಲಸ ಮಾಡಿ, ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ ಎಂದರು.
ಮುಖ್ಯಮಂತ್ರಿ ಹುದ್ದೆ, ಅಧಿಕಾರ ಹಸ್ತಾಂತರ ಈ ಎಲ್ಲದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು ಸೇರಿದಂತೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸುತ್ತಾರೆ. ಅವರುಗಳು ಸೂಕ್ತ ತೀರ್ಮಾನ ಮಾಡುತ್ತಾರೆ ಎಂದರು.