Published
3 months agoon
By
Akkare News
ಉತ್ತರ ಕರ್ನಾಟಕದ ಸಮಸ್ಯೆಗಳು, ಪರಿಹಾರಗಳನ್ನೇ ಪ್ರಧಾನಾಗಿಟ್ಟುಕೊಂಡು ಹಾಗೂ ಸಿಎಂ ಕುರ್ಚಿ ಕದನದ ಮಧ್ಯ ರಾಜ್ಯದಲ್ಲಿ ಎರಡು ವಾರಗಳ ಚಳಿಗಾಲದ ಬೆಳಗಾವಿ ಅಧಿವೇಶನ (Belagavi Winter Session 2025) ಇಂದಿನಿಂದ (ಡಿ.8) ಆರಂಭವಾಗುತ್ತಿದೆ. ರಾಜ್ಯದ ನಾಯಕತ್ವ ಬದಲಾವಣೆ ತಿಕ್ಕಾಟದ ಮಧ್ಯ ಒಗ್ಗಟ್ಟಿನ ಮಂತ್ರ ಜಪಿಸಿರುವ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ವಿಪಕ್ಷಗಳ ಟೀಕೆಗಳಿಗೆ, ಪ್ರಶ್ನೆಗಳು ಮತ್ತು ಆರೋಪಗಳಿಗೆ ತಕ್ಕ ಉತ್ತರ ಕೊಡಲು ಸಜ್ಜಾಗಿದ್ದಾರೆ.


ಬೆಂಬಲ ಬೆಲೆ, ರೈತರು ಬೆಳೆದ ಕಬ್ಬು, ಮಕ್ಕೆಜೋಳ ಇತರ ಬೆಳೆಗೆ ಸೂಕ್ತ ಬೆಲೆ, ನೆರೆ-ಪ್ರವಾಹ ಪರಿಹಾರ, ಸರ್ಕಾರ ನೇಮಕಾತಿ, ಪೊಲೀಸ್ ವೈಫಲ್ಯ, ನೀರಾವರಿ ವಿಷಯಗಳು ಸೇರಿದಂತೆ ಉತ್ತರ ಕರ್ನಾಟಕದ ಹತ್ತು ಹಲವು ಸಮಸ್ಯೆಗಳು, ಬೇಡಿಕೆಗಳ ಪ್ರಸ್ತಾಪಿಸಿ ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ಅಣಿಯಾಗಿವೆ. ಇದಕ್ಕೆ ರಾಜ್ಯ ಸರ್ಕಾರ ಎರಡೂ ವರೆ ವರ್ಷಗಳ ಸಾಧನೆ ಸಮೇತ ಪ್ರತ್ಯುತ್ತರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಲು ತಯಾರಾಗಿದ್ದಾರೆ.

ಹಲವು ವರ್ಷಗಳಿಂದ ಬೆಳಗಾವಿ ಚಳಿಗಾಲ ಅಧಿವೇಶನ ನಡೆದಿದೆ. ಅದೆಷ್ಟು ಉತ್ತರ ಕರ್ನಾಟಕದ ಪ್ರಶ್ನೆಗಳಿಗೆ ಉತ್ತರ, ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಸರ್ಕಾರ ಮತ್ತ ವಿಪಕ್ಷಗಳು ತನ್ನನ್ನು ತಾನು ಕೇಳಿಕೊಳ್ಳಬೇಕು. ಈ ಬಾರಿಯು ಉತ್ತರ ಕರ್ನಾಟಕದ ಪ್ರಮುಖ ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ. ಈ ವೇಳೆ ರಾಜ್ಯ ನಾಯಕತ್ವ ಕಿತ್ತಾಟ, ಕಾನೂನು ಸುವ್ಯವಸ್ಥೆ, ರೈತರ ಬೇಡಿಕೆ-ಸಮಸ್ಯೆಗಳು, ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ, ಅಭಿವೃದ್ಧಿಗೆ ಹಿನ್ನಡೆ, ಡಿಕೆಶಿ ದುಬಾರಿ ವಾಚ್ ಪ್ರಕರಣ, ಅನುದಾನ ಆರೋಪಗಳು, ಅಂಕಿ-ಸಂಖ್ಯೆ, ಪ್ರತ್ಯುತ್ತರಗಳ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುವ ನಿರೀಕ್ಷೆ ಇದೆ.
ಈ ವೇಳೆ ಸರ್ಕಾರ ಸುಮಾರು 20 ವಿಧೇಯಕ ಮಂಡನೆಗೆ ಸಿದ್ಧತೆ ನಡೆದಿದೆ. ಜೊತೆಗೆ ಕಬ್ಬು ಬೆಳೆಗಾರರು ಸೇರಿದಂತೆ ವಿವಿಧ ರೈತರ ಬೇಡಿಕೆಗಳಿಗೆ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟಿಸಲು ಸುಮಾರು 89 ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಈಹಿನ್ನೆಲೆಯಲ್ಲಿ ಪೊಲೀಸರು ಸುವರ್ಣಸೌಧ ಸುತ್ತಮುತ್ತ ಭಾರೀ ಬಿಗಿ ಭದ್ರತೆ ಒದಗಿಸಿದ್ದಾರೆ. 6000 ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿದೆ. ಇತ್ತೀಚೆಗೆ ದೆಹಲಿ ಕೆಂಪುಕೋಟೆ ಬಳಿಯೇ ಸ್ಪೋಟ ಸಂಭವಿಸಿದ್ದರಿಂದ ಖಾಕಿ ಹೈಅಲರ್ಟ್ ಆಗಿದೆ. ಡಿಸೆಂಬರ್ 19ರವರೆಗೆ ಚಳಿಗಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ.









