Connect with us

ಇತರ

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

Published

on

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಗದ್ದಲ ಹೆಚ್ಚಾದ ಹಿನ್ನೆಲೆ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಮಂಗಳವಾರದವರೆಗೆ (ನಾಳೆಗೆ) ಮುಂದೂಡಿದರು.

ಮಾಜಿ ಸೇನಾ ಮುಖ್ಯಸ್ಥರ ಬರಹಗಳ ಆಧಾರದ ಮೇಲೆ ಗಂಭೀರ ರಾಷ್ಟ್ರೀಯ ಭದ್ರತಾ ಸಮಸ್ಯೆಗಳ ಬಗ್ಗೆ ಮಾತನಾಡಲು ರಾಹುಲ್ ಗಾಂಧಿ ಪಟ್ಟು ಹಿಡಿದರು. ಆದರೆ, ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪರಸ್ಪರ ವಾಗ್ವಾದ ಉಂಟಾಯಿತು. ಅಂತಿಮವಾಗಿ ಕಲಾಪವನ್ನು ಮುಂದೂಡಲಾಯಿತು.

“ಸದನವನ್ನು ಉದ್ದೇಶಿಸಿ ನಾನು ಸಂಕ್ಷಿಪ್ತ ಹೇಳಿಕೆ ನೀಡಲು ಬಯಸಿದ್ದರೂ ಮಾತನಾಡದಂತೆ ತಡೆಯಲಾಯಿತು” ಎಂದು ಸಂಸತ್ತಿನ ಹೊರಗೆ ರಾಹುಲ್ ಗಾಂಧಿ ಹೇಳಿದರು.

ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ಕೇವಲ 2-3 ಸಾಲುಗಳನ್ನು ಮಾತನಾಡಬೇಕಾಗಿದೆ. ಇದು ರಾಷ್ಟ್ರೀಯ ಭದ್ರತೆಯ ವಿಷಯ. ಇವು ಸೇನಾ ಮುಖ್ಯಸ್ಥರ (ಮಾಜಿ) ಮಾತುಗಳು, ಅವರು ರಾಜನಾಥ್ ಸಿಂಗ್ ಮತ್ತು ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಸಂಭಾಷಣೆಯ ಮಾತುಗಳು. ಸೇನಾ ಮುಖ್ಯಸ್ಥರು (ಮಾಜಿ) ಏನು ಬರೆದಿದ್ದಾರೆ ಮತ್ತು ರಾಜನಾಥ್ ಸಿಂಗ್ ಮತ್ತು ಪ್ರಧಾನಿ ಮೋದಿ ಅವರಿಗೆ ಯಾವ ಆದೇಶಗಳನ್ನು ನೀಡಿದ್ದರು ಎಂಬುದನ್ನು ಸದನದಲ್ಲಿ ಹೇಳಲು ನಾನು ಬಯಸುತ್ತೇನೆ…” ಎಂದು ರಾಹುಲ್ ಗಾಂಧಿ ತಿಳಿಸಿದರು.

ನನ್ನ ಮಾತಿಗೆ ಏಕೆ ಅಡ್ಡಿಪಡಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದು, ರಾಜಕೀಯ ನಾಯಕತ್ವವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದರು.

“ನಾನು ಸದನದಲ್ಲಿ ಮಾತನಾಡಲು ಬಯಸುತ್ತೇನೆ. ಅವರು ಏಕೆ ಹೆದರುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಪ್ರಧಾನಿ ಏನು ಹೇಳಿದ್ದರು ಮತ್ತು ರಾಜನಾಥ್ ಸಿಂಗ್ ಅವರು ಏನು ಹೇಳಿದ್ದರು ಎಂಬುದು ಇಲ್ಲಿ ಮುಖ್ಯ ವಿಷಯ. ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆಯೋ ಇಲ್ಲವೋ, ಅದು ಬೇರೆ ಪ್ರಶ್ನೆ. ನಾವು ಅದಕ್ಕೆ ಮತ್ತೆ ಬರುತ್ತೇವೆ. ಅದಕ್ಕೂ ಮುನ್ನ ದೇಶದ ನಾಯಕ ಹೇಳಿಕೆ ನೀಡಬೇಕು. ದೇಶದ ನಾಯಕ ಹೇಳಿಕೆಯಿಂದ ತಪ್ಪಿಸಿಕೊಳ್ಳಬಾರದು ಅಥವಾ ಹೊಣೆಯಗಾರಿಕೆಯನ್ನು ಬೇರೆಯವರ ಹೆಗಲಿಗೆ ಹೊರಿಸಬಾರದು” ಎಂದರು.

ತಮ್ಮ ನಿಲುವನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, ಈ ವಿಷಯವು ರಾಜಕೀಯವನ್ನು ಮೀರಿ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದೆ ಎಂದು ಹೇಳಿದರು. ರಾಷ್ಟ್ರೀಯ ಭದ್ರತೆಯ ವಿಷಯವು ದೇಶಕ್ಕೆ ಅತ್ಯಂತ ಮುಖ್ಯವಾದ ವಿಷಯವೆಂದು ನಾನು ಪರಿಗಣಿಸುತ್ತೇನೆ. ಇದು ರಕ್ಷಣಾ ಸಚಿವರು, ಪ್ರಧಾನ ಮಂತ್ರಿಗಳಿಗೆ ಅನಾನುಕೂಲಕರವಾಗಿದೆ. ನರವಾಣೆ ಅವರ ಆತ್ಮಚರಿತ್ರೆಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗಿದೆ ಎಂದು ಹೇಳಿದರು. ಮಾಜಿ ಸೇನಾ ಮುಖ್ಯಸ್ಥರ ಅಭಿಪ್ರಾಯಗಳ ಬಗ್ಗೆ ಸರ್ಕಾರಕ್ಕಿರುವ ಅಸಮಾಧಾನವನ್ನು ಪ್ರಶ್ನಿಸಿದರು.

ಇದು ನಾನು ಹೇಳುತ್ತಿರುವ ಮಾತಲ್ಲ, ಬದಲಿಗೆ ಮಾಜಿ ಸೇನಾ ಮುಖ್ಯಸ್ಥರು ತಮ್ಮ ಪುಸ್ತಕದಲ್ಲಿ ಬರೆದಿರುವ ವಿಷಯವಾಗಿದೆ. ಈ ಪುಸ್ತಕವನ್ನು ಪ್ರಕಟಿಸಲು ಸರ್ಕಾರ ಅನುಮತಿ ನೀಡುತ್ತಿಲ್ಲ, ಇದರಿಂದಾಗಿ ಅದು ಹಾಗೆಯೇ ಉಳಿದುಹೋಗಿದೆ. ಇದು ಒಬ್ಬ ಮಾಜಿ ಸೇನಾ ಮುಖ್ಯಸ್ಥರ ದೃಷ್ಟಿಕೋನವಾಗಿದ್ದು, ಅವರ ಈ ವಿಚಾರಗಳಿಗೆ ಸರ್ಕಾರವೇಕೆ ಇಷ್ಟೊಂದು ಹೆದರುತ್ತಿದೆ? ಅವರು ಹೇಳಬಯಸುವ ಸತ್ಯದ ಬಗ್ಗೆ ಭಯವೇಕೆ? ಈ ಪುಸ್ತಕದಿಂದ ನಾವು ಪ್ರಧಾನಮಂತ್ರಿಯವರ ಬಗ್ಗೆ ಮತ್ತು ರಾಜನಾಥ್ ಸಿಂಗ್ ಅವರ ಬಗ್ಗೆ ಮಾತ್ರವಲ್ಲದೆ, ದೇಶದ ರಾಜಕೀಯ ನಾಯಕತ್ವವು ಭಾರತೀಯ ಸೇನೆಯನ್ನು ಹೇಗೆ ಸಂಕಷ್ಟಕ್ಕೆ ದೂಡಿತು ಎಂಬ ಬಗ್ಗೆಯೂ ಬಹಳಷ್ಟು ಕಲಿಯಲಿದ್ದೇವೆ” ಎಂದರು.

ನರವಾಣೆಯವರು ತಮ್ಮ ಪುಸ್ತಕದಲ್ಲಿ ಪ್ರಧಾನಮಂತ್ರಿ ಮತ್ತು ರಾಜನಾಥ್ ಸಿಂಗ್ ಅವರ ಬಗ್ಗೆ ಸ್ಪಷ್ಟವಾಗಿ ಬರೆದಿದ್ದಾರೆ. ಈ ವಿಷಯವು ಈಗಾಗಲೇ ಲೇಖನವೊಂದರಲ್ಲಿ ಪ್ರಕಟವಾಗಿದ್ದು, ನಾನು ಆ ಲೇಖನವನ್ನು ಉಲ್ಲೇಖಿಸುತ್ತಿದ್ದೇನೆ. ಆದರೆ, ಅವರು ನನ್ನನ್ನು ಮಾತನಾಡಲು ಬಿಡುತ್ತಿಲ್ಲ… ಒಂದು ವೇಳೆ ಈ ಸತ್ಯ ಹೊರಬಂದರೆ, ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರ ಅಸಲಿ ಮುಖವಾಡ ಜನರಿಗೆ ತಿಳಿಯುತ್ತದೆ ಎಂಬ ಭಯ ಅವರಿಗಿದೆ. ಚೀನಾ ನಮ್ಮ ಎದುರು ನಿಂತು ಮುನ್ನುಗ್ಗುತ್ತಿದ್ದಾಗ, ಆ ’56 ಇಂಚಿನ ಎದೆ’ಗೆ ಏನಾಗಿತ್ತು ಎಂಬುದು ಆಗ ಬಯಲಾಗುತ್ತದೆ”

Continue Reading
Click to comment

Leave a Reply

Your email address will not be published. Required fields are marked *

Advertisement