Connect with us

ಇತರ

ಪ್ಯಾನಿಕ್ ಬಟನ್ ಹೆಸರಲ್ಲಿ ಭಾರಿ ದಂಧೆ: ಮಂಗಳೂರಿನಲ್ಲಿ ಟ್ಯಾಕ್ಸಿ ಮಾಲೀಕರ ಸಂಘದಿಂದ ಗಂಭೀರ ಆರೋಪ

Published

on

ರಾಜ್ಯ ಸರ್ಕಾರವು ಪ್ರವಾಸಿ ವಾಹನಗಳಲ್ಲಿ ‘ಪ್ಯಾನಿಕ್ ಬಟನ್’ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವ ಆದೇಶದ ಹಿಂದೆ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ಕಿಡಿಕಾರಿದೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆನಂದ ಕೆ., ನೆರೆಯ ಕೇರಳದಲ್ಲಿ ಕೇವಲ 4,000 ರೂಪಾಯಿಗೆ ಸಿಗುವ ಈ ಸಾಧನಕ್ಕೆ ಕರ್ನಾಟಕದಲ್ಲಿ ಅಕ್ರಮವಾಗಿ 13,500 ರಿಂದ 16,000 ರೂಪಾಯಿವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಅಲ್ಲದೆ, ಇಷ್ಟು ದೊಡ್ಡ ಮೊತ್ತ ಪಡೆದರೂ ಕಂಪನಿಗಳು ಚಾಲಕರಿಗೆ ಅಧಿಕೃತ ಬಿಲ್ ನೀಡುತ್ತಿಲ್ಲ ಮತ್ತು ಸಾರಿಗೆ ಇಲಾಖೆ ನ್ಯಾಯಾಲಯಕ್ಕೆ ನೀಡಿದ ದರ ಮಾಹಿತಿಗಿಂತ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಾಂತ್ರಿಕವಾಗಿ ಈ ಪ್ಯಾನಿಕ್ ಬಟನ್ ವ್ಯವಸ್ಥೆಯು ಸಂಪೂರ್ಣ ವಿಫಲವಾಗಿದ್ದು, ಕೇವಲ ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ ಎಂದು ಸಂಘಟನೆಯು ಟೀಕಿಸಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಅಳವಡಿಸಲಾದ ಈ ಬಟನ್ ಒತ್ತಿದರೂ ಯಾವುದೇ ಕಂಟ್ರೋಲ್ ರೂಮ್‌ನಿಂದ ಪ್ರತಿಕ್ರಿಯೆ ಸಿಗುತ್ತಿಲ್ಲ ಹಾಗೂ ತುರ್ತು ಸಂದರ್ಭದಲ್ಲಿ ನೆರವು ನೀಡಬೇಕಾದ ಇಆರ್‌ಎಸ್ (ERS) ವ್ಯವಸ್ಥೆಯೂ ಕಾರ್ಯನಿರ್ವಹಿಸುತ್ತಿಲ್ಲ. ಬಟನ್ ಒತ್ತಿದ ವಾರದ ನಂತರವೂ ಚಾಲಕರಿಗೆ ಯಾವುದೇ ಕರೆಗಳು ಬರುತ್ತಿಲ್ಲದಿರುವುದು ಈ ಸಾಧನಗಳು ಕೇವಲ ‘ಡಮ್ಮಿ’ಯಾಗಿವೆ ಎಂಬುದನ್ನು ಸಾಬೀತುಪಡಿಸುತ್ತಿವೆ. ನಿರ್ಭಯಾ ಪ್ರಕರಣದ ನೆಪವೊಡ್ಡಿ ಕೇವಲ ಟ್ಯಾಕ್ಸಿ ಮತ್ತು ಕ್ಯಾಬ್‌ಗಳಿಗೆ ಇದನ್ನು ಸೀಮಿತಗೊಳಿಸಿರುವುದು ವಿರೋಧಾಭಾಸ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಪ್ಯಾನಿಕ್ ಬಟನ್ ಅಳವಡಿಸಿಕೊಂಡಿರುವ ಚಾಲಕರಿಗೆ ಈಗ ವಾರ್ಷಿಕ ರಿಚಾರ್ಜ್ ಹೆಸರಿನಲ್ಲಿ ಕಂಪನಿಗಳು ಕಿರುಕುಳ ನೀಡುತ್ತಿವೆ. ಸರ್ಕಾರ ನಿಗದಿಪಡಿಸಿದ 1,800 ರೂಪಾಯಿ ಬದಲಿಗೆ 3,800 ರೂಪಾಯಿ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ.

ಒಂದು ವೇಳೆ ರಿಚಾರ್ಜ್ ಮಾಡದಿದ್ದರೆ ಆರ್‌ಟಿಒ ಅಧಿಕಾರಿಗಳು ವಾಹನಗಳ ಎಫ್‌ಸಿ (FC) ತಡೆಹಿಡಿಯುತ್ತಿರುವುದು ಚಾಲಕರನ್ನು ಸಂಕಷ್ಟಕ್ಕೆ ದೂಡಿದೆ. ಈ ಅವೈಜ್ಞಾನಿಕ ಪದ್ಧತಿಯನ್ನು ಕೂಡಲೇ ನಿಲ್ಲಿಸದಿದ್ದರೆ ಮಂಗಳೂರು ಮತ್ತು ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement