Connect with us

ಇತರ

ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ “ಫೇಕ್” ಜನನ ಸರ್ಟಿಫಿಕೇಟ್ : ಪತಿ ಫರ್ಮನ್ ಖಾನ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲು

Published

on

ನವದೆಹಲಿ: ಕುಂಭಮೇಳದಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಸೃಷ್ಟಿಸಿ ಸುದ್ದಿಯಾಗಿದ್ದ ಕುಂಭಮೇಳದ ಬೆಕ್ಕಿನ‌ಕಣ್ಣಿನ ಸುಂದರಿ ಮೊನಾಲಿಸಾ ಈಗ ಮದುವೆಯ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.

ಅಂತರ್ ಧರ್ಮೀಯ ವಿವಾಹದ ಮೂಲಕ ಗಮನ ಸೆಳೆದಿದ್ದ ಮೊನಾಲಿಸಾ ಮೂಲತಃ ಅಪ್ರಾಪ್ತೆ ಎಂಬ ಆಘಾತಕಾರಿ ವಿಚಾರ ಇದೀಗ ದಾಖಲೆಯಿಂದ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಫರ್ಮನ್ ಖಾನ್ ವಿರುದ್ಧ ಗಂಭೀರ ಕಾನೂನು ಕ್ರಮ ಜರುಗಿಸಲಾಗಿದೆ.

 

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ವಿವರವಾದ ತನಿಖೆಯ ಬಳಿಕ, ಮೊನಾಲಿಸಾ ಮದುವೆಯ ಸಂದರ್ಭ ಅಪ್ರಾಪ್ತೆಯಾಗಿದ್ದರು ಎಂಬುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಮಧ್ಯಪ್ರದೇಶದ ಖಾರ್ಗೋನೆ ಜಿಲ್ಲೆಯ ಮಹೇಶ್ವರ್ ಪೊಲೀಸ್ ಠಾಣೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

 

ಮೊನಾಲಿಸಾ ಮತ್ತು ಫರ್ಮಾನ್‌ಖಾನ್ ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಅಂತರ್ ಧರ್ಮ ವಿವಾಹವಾದ್ದರಿಂದ ಇದು ಭಾರೀ ಸುದ್ದಿಯಾಗಿತ್ತು. ಆಕೆಯ ವಯಸ್ಸಿನ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಎನ್‌ಸಿಎಸ್‌ಟಿ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರ ಮೇಲ್ವಿಚಾರಣೆಯಲ್ಲಿ ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ತನಿಖೆ ನಡೆಸಲಾಯಿತು. ಮಹೇಶ್ವರದ ಅಧಿಕೃತ ಆಸ್ಪತ್ರೆ ದಾಖಲೆಗಳ ಪ್ರಕಾರ, ಮೋನಾಲಿಸಾ ಪಾರಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಡಿಸೆಂಬರ್ 30, 2009 ರಂದು ಜನಿಸಿದ್ದಾರೆ. ಮಾರ್ಚ್ 11, 2026 ರಂದು ಮದುವೆಯಾದ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ ತುಂಬಿತ್ತು.

ದಂಪತಿಗಳು ನೀಡಿದ ಆಧಾರ್ ವಿವರಗಳನ್ನು ನಂಬಿ ಕೇರಳದ ದೇವಸ್ಥಾನವೊಂದರಲ್ಲಿ ಇವರ ಮದುವೆ ಮಾಡಿಸಲಾಗಿತ್ತು ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಮದುವೆ ನೋಂದಣಿಯಾಗಿತ್ತು. ಈಗ ಈ ನಕಲಿ ದಾಖಲೆಗಳನ್ನು ರದ್ದುಗೊಳಿಸಲು ಆದೇಶಿಸಲಾಗಿದೆ.

ಮೊನಾಲಿಸಾ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರುವುದರಿಂದ, ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಮಾತ್ರವಲ್ಲದೆ, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವು ಸಂಘಟನೆಗಳ ಕೈವಾಡವಿರುವ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು, ಕೇರಳ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಎಪ್ರಿಲ್ 22 ರಂದು ನವದೆಹಲಿಯಲ್ಲಿ ಆಯೋಗದ ಮುಂದೆ ಹಾಜರಾಗಲು ಸಮನ್ಸ್ ನೀಡಿದೆ. ಅಲ್ಲದೆ, ಪ್ರತಿ ಮೂರು ದಿನಕ್ಕೊಮ್ಮೆ ಪ್ರಕರಣದ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement