Published
23 hours agoon
By
Akkare News
ಬೆಂಗಳೂರು, ಸೆಪ್ಟೆಂಬರ್ 17: ಮದ್ಯಪಾನ ಮಾಡಿ ನ್ಯಾಯಾಲಯದ ಕೊಠಡಿಯಲ್ಲೇ ನ್ಯಾಯಾಧೀಶರ ವಿರುದ್ಧ ರಂಪಾಟ ಮಾಡಿ, ನ್ಯಾಯಾಲಯ ನಿಂದನೆ ಆರೋಪದಡಿ 51 ವರ್ಷದ ವಕೀಲ ಪಂಕಜ್ ಕೌಶಿಕ್ ಎಂಬುವವರಿಗೆ ಹೈಕೋರ್ಟ್ ಒಂದು ದಿನದ ಸಾದಾ ಜೈಲು ಶಿಕ್ಷೆ ಹಾಗೂ ರೂ. 2,000 ದಂಡ ವಿಧಿಸಿ ಆದೇಶ ಹೊರಡಿಸಿದೆ. 
ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವೆಂಕಟೇಶ್ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಸೆಕ್ಷನ್ 12(1) ಅಡಿಯಲ್ಲಿ ಕೌಶಿಕ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು 2022ರಲ್ಲಿ ಸ್ವಯಂಪ್ರೇರಿತವಾಗಿ ಆರಂಭಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಈ ಶಿಕ್ಷೆ ವಿಧಿಸಲಾಗಿದೆ.

ಎನಿದು ಘಟನೆ? ಉತ್ತರ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು 2022ರ ಏಪ್ರಿಲ್ 12ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದಿದ್ದರು. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ-2ರ ನ್ಯಾಯಾಧೀಶ ಶ್ರೀನಿವಾಸ್ ಪಾಟೀಲ್ ಅವರು ಏಪ್ರಿಲ್ 8ರಂದು ಬರೆದಿದ್ದ ಪತ್ರ ಹಾಗೂ ಆರೋಪಿಯು ಮದ್ಯಪಾನ ಮಾಡಿದ್ದನ್ನು ದೃಢಪಡಿಸುವ ಪ್ರಮಾಣಪತ್ರವನ್ನೂ ಸಲ್ಲಿಸಲಾಗಿತ್ತು.


