Published
2 hours agoon
By
Akkare News
ಮಂಗಳೂರು : ಕರಾವಳಿಯ ಮಣ್ಣಿಗೆ ಭಾವನೆಗಳನ್ನು ಕೆರಳಿಸುವ ರಾಜಕಾರಣಕ್ಕಿಂತ ಜನರ ಬದುಕನ್ನು ಹಸನು ಮಾಡುವ ನೈಜ ಅಭಿವೃದ್ಧಿಯ ಸ್ಪರ್ಶ ಬೇಕಿತ್ತು. ಮಂಗಳೂರಿನ ಪವಿತ್ರ ನೆಲದಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರಾವಳಿಯ ಕೋಟ್ಯಂತರ ಜನರ ಭಾವನಾತ್ಮಕ ಕನಸುಗಳಿಗೆ ಜೀವ ತುಂಬಿ ಹೊಸ ಇತಿಹಾಸವನ್ನೇ ಬರೆದಿದೆ. “ನಾವು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ, ಬದಲಾಗಿ ಅವರ ಬದುಕಿನ ಏಳಿಗೆಗಾಗಿ ಆಡಳಿತ ನಡೆಸುತ್ತೇವೆ” ಎಂಬ ದೃಢ ಸಂಕಲ್ಪ ಈ ಸಭೆಯ ಪ್ರತಿಯೊಂದು ದಿಟ್ಟ ನಿರ್ಧಾರದಲ್ಲೂ ನಿಚ್ಚಳವಾಗಿ ಸಾಬೀತಾಗಿದೆ. 
ಕರಾವಳಿಯ ಸಮಗ್ರ ವಿಕಾಸಕ್ಕೆ ಪೂರಕವಾಗಿ ಸಾರಿಗೆ, ಸಂಪರ್ಕ ಮತ್ತು ಮೂಲಸೌಕರ್ಯ ಜಾಲವನ್ನು ಬಲಪಡಿಸಲು ಸರ್ಕಾರ ಮಹತ್ವದ ಯೋಜನೆಗಳನ್ನು ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ಆಧುನೀಕರಣ, ಗ್ರಾಮೀಣ ಸಂಪರ್ಕ ರಸ್ತೆಗಳ ಬಲವರ್ಧನೆ, ಸೇತುವೆಗಳ ನಿರ್ಮಾಣ, ಬಂದರುಗಳ ವಿಸ್ತರಣೆ ಮತ್ತು ನಿರಂತರ ಕುಡಿಯುವ ನೀರಿನ ಯೋಜನೆಗಳಿಗೆ ವಿಶೇಷ ಅನುದಾನ ಒದಗಿಸುವ ಮೂಲಕ ಜನಜೀವನವನ್ನು ಸುಗಮಗೊಳಿಸುವ ಕಾಯಕಲ್ಪಕ್ಕೆ ಮುನ್ನುಡಿ ಬರೆಯಲಾಗಿದೆ.

ಇದರೊಂದಿಗೆ ಕರಾವಳಿಯ ಪಾವಿತ್ರ್ಯತೆ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಪುಣ್ಯಸ್ಥಳಗಳು ಮತ್ತು ದೈವಸ್ಥಾನಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟಿರುವುದು ಭಕ್ತ ಸಮೂಹದಲ್ಲಿ ಧನ್ಯತಾ ಭಾವ ಮೂಡಿಸಿದೆ. ತಾಯ್ನುಡಿಯ ಗೌರವ, ಯುವಜನತೆಯ ಉದ್ಯೋಗದ ಆಸೆ, ಸುಭದ್ರ ಮೂಲಸೌಕರ್ಯ ಮತ್ತು ಶ್ರದ್ಧಾ ಕೇಂದ್ರಗಳ ರಕ್ಷಣೆಯನ್ನು ಒಂದೇ ವೇದಿಕೆಯಲ್ಲಿ ಸಾಕಾರಗೊಳಿಸಿದ ಈ ಸಂಪುಟ ಸಭೆಯು ಕರಾವಳಿ ಜನರ ಬದುಕಿನಲ್ಲಿ ನವೋದಯದ ಅಧ್ಯಾಯವನ್ನು ತೆರೆದಿದೆ. – ಪದ್ಮರಾಜ್ ಆರ್. ಪೂಜಾರಿ ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ


