Published
8 hours agoon
By
Akkare News
ಮಂಗಳೂರು-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಓಡಿಸಬೇಕು. ಈಗ ಮಡಗಾಂವ್- ಮಂಗಳೂರು ಮಧ್ಯೆ ಇರುವ ವಂದೇ ಭಾರತ್ ರೈಲನ್ನು ಮುಂಬೈ ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇತ್ತು. ಆದರೆ, ಈಗಿರುವ ಮಡಗಾಂವ್-ಮಂಗಳೂರು ರೈಲನ್ನೇ ಯಶವಂತಪುರದವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.
ಈಗಿರುವ ವೇಳಾಪಟ್ಟಿಯಂತೆ ಈ ರೈಲಿಗೆ ದಾರಿ ಮಧ್ಯೆ 12 ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ಯಶವಂತಪುರದಿಂದ ಬುಧವಾರ ಹೊರತುಪಡಿಸಿ, ಮಡಗಾಂವ್ ಕಡೆಯಿಂದ ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ವಂದೇ ಭಾರತ್ ರೈಲು ಸಂಚರಿಸಲಿದೆ. ಯಶವಂತಪುರದಿಂದ ಬೆಳಿಗ್ಗೆ 7.35ಕ್ಕೆ ಹೊರಡಲಿದೆ. ಶ್ರವಣಬೆಳಗೊಳಕ್ಕೆ ಬೆಳಿಗ್ಗೆ 9.03, ಹಾಸನಕ್ಕೆ 9.38, ಸಕಲೇಶಪುರಕ್ಕೆ 10.20, ಸುಬ್ರಹ್ಮಣ್ಯ ರಸ್ತೆ ಮಧ್ಯಾಹ್ನ 12.40, ಕಬಕ ಪುತ್ತೂರು ಮಧ್ಯಾಹ್ನ 1.25, ಮಂಗಳೂರು ಜಂಕ್ಷನ್ ಮಧ್ಯಾಹ್ನ 3.05, ಉಡುಪಿಗೆ ಸಂಜೆ 4.20, ಕುಂದಾಪುರಕ್ಕೆ ಸಂಜೆ 4.28, ಮೂಕಾಂಬಿಕಾ ರಸ್ತೆ ಕೊಲ್ಲೂರು ಸಂಜೆ 5.30, ಮುರುಡೇಶ್ವರಕ್ಕೆ ಸಂಜೆ 6, ಗೋಕರ್ಣ ರಸ್ತೆಗೆ ರಾತ್ರಿ 7, ಕಾರವಾರಕ್ಕೆ ರಾತ್ರಿ 7.45ಕ್ಕೆ ಹಾಗೂ ಮಡಗಾಂವ್ಗೆ ರಾತ್ರಿ 8.55ಕ್ಕೆ ತಲುಪಲಿದೆ.
ಮಡಗಾಂವ್ನಿಂದ ಬೆಳಿಗ್ಗೆ 8.20ಕ್ಕೆ ಹೊರಡಲಿದೆ. ಕಾರವಾರಕ್ಕೆ ಬೆಳಿಗ್ಗೆ 9.03, ಗೋಕರ್ಣ ರಸ್ತೆಗೆ 9.48, ಮುರುಡೇಶ್ವರಕ್ಕೆ 11, ಮೂಕಾಂಬಿಕಾ ರೋಡ್ ಬೈಂದೂರು 11.20, ಕುಂದಾಪುರಕ್ಕೆ ಬೆಳಿಗ್ಗೆ 11.48, ಉಡುಪಿ ಮಧ್ಯಾಹ್ನ 12.18, ಮಂಗಳೂರು ಜಂಕ್ಷನ್ 1.50, ಕಬಕ ಪುತ್ತೂರು 2.43, ಸುಬ್ರಹ್ಮಣ್ಯ ರಸ್ತೆ 3.28, ಸಕಲೇಶಪುರಕ್ಕೆ ಸಂಜೆ 5.30, ಹಾಸನಕ್ಕೆ 6.13, ಶ್ರವಣಬೆಳಗೊಳಕ್ಕೆ ಸಂಜೆ 6.43ಕ್ಕೆ ಹಾಗೂ ಯಶವಂತಪುರಕ್ಕೆ ರಾತ್ರಿ 9.15ಕ್ಕೆ ತಲುಪಲಿದೆ.
ಯಶವಂತಪುರ ಮತ್ತು ಮಡಗಾಂವ್ ಮಧ್ಯೆ 670 ಕಿ.ಮೀ. ಅಂತರ ಇದೆ. ಈ ರೈಲಿಗೆ 12.20ರಿಂದ 12.55 ಗಂಟೆ ಪ್ರಯಾಣದ ಅವಧಿ ತಗಲುತ್ತದೆ. ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಮಧ್ಯೆ ಪಶ್ಚಿಮ ಘಟ್ಟದ ಮಧ್ಯೆ ಸಾಗುವ ಮಾರ್ಗವು ಕಡಿದಾದ ಇಳಿಜಾರು, 57 ಸುರಂಗ, 258 ಸೇತುವೆ 108 ಕಡಿದಾದ ತಿರುವುಗಳನ್ನು ಹೊಂದಿದೆ. ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಮಧ್ಯೆ ವೇಗ ಮಿತಿ ಬಹಳ ಕಡಿಮೆ ಇದ್ದು, ಇದನ್ನು ಲೆಕ್ಕ ಹಾಕಿದರೆ ಈ ರೈಲಿನ ಒಟ್ಟಾರೆ ಸರಾಸರಿ ವೇಗ ಗಂಟೆಗೆ 54 ಕಿ.ಮೀ. ಆಗುತ್ತದೆ. ದೇಶದಲ್ಲಿ ಈಗ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳಲ್ಲಿ ಅತೀ ಹೆಚ್ಚು ಪ್ರಯಾಣದ ಅವಧಿಯನ್ನು ಈ ರೈಲು ತೆಗೆದುಕೊಳ್ಳಲಿದೆ ಎಂಬುದು ರೈಲ್ವೆ ಇಲಾಖೆಯ ಮೂಲಗಳ ಮಾಹಿತಿ.
ಮಂಗಳೂರು ಸೆಂಟ್ರಲ್ಗೆ ಬರಲಿ: ವಂದೇ ಭಾರತ್ ರೈಲಿಗೆ ಹಿಂದೆ ಮತ್ತು ಮುಂದೆ ಎರಡು ಎಂಜಿನ್ ಇರುತ್ತವೆ. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಈ ರೈಲಿಗೆ ಎಂಜಿನ್ ಬದಲಿಸುವ ಪ್ರಮೇಯ ಇಲ್ಲ. ಮಂಗಳೂರು ಜಂಕ್ಷನ್ ವರೆಗೆ ಬರುವ ಈ ರೈಲು ಮಂಗಳೂರು ಸೆಂಟ್ರಲ್ವರೆಗೆ ಬಂದು ಹೋಗಲು 12 ನಿಮಿಷ ಸಾಕು. ಈ ರೈಲನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ವರೆಗೆ ವಿಸ್ತರಿಸಬೇಕು ಎಂಬುದು ಮಂಗಳೂರಿಗರ ಬೇಡಿಕೆ. ಹೀಗೆ ಮಾಡಿದರೆ ಪ್ರಯಾಣ ಅವಧಿ ಹೆಚ್ಚುತ್ತದೆ ಎಂಬುದು ಉಡುಪಿ ಭಾಗದವರ ಆಕ್ಷೇಪ. 
ಇದು ಹೀಗೇಕೆ ಎಂದು ಕೇಳಿದರೆ ರೈಲ್ವೆ ಇಲಾಖೆಯ ಮೂಲಗಳು ಹೇಳುವ ಮಾತು ಎಂದರೆ ‘ಎಲ್ಲರಿಗೂ ಅನುಕೂಲಕರವಾದ ಸಾಮಾಜಿಕ ನ್ಯಾಯ’ ಎಂದು. ಇದಕ್ಕೆ ಕಾರಣವೂ ಇಲ್ಲದಿಲ್ಲ, ಯಶವಂತಪುರ-ಮಂಗಳೂರು ಮಧ್ಯೆ ಆರಂಭಿಸುವ ವಂದೇ ಭಾರತ್ ರೈಲನ್ನು ಉಡುಪಿಗೆ ವಿಸ್ತರಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಸಚಿವರಿಗೆ ಮನವಿ ಮಾಡಿದರು. ಉತ್ತರ ಕನ್ನಡದ ಕಾರವಾರದಿಂದಲೂ ಬೆಂಗಳೂರಿಗೆ ವಂದೆ ಭಾರತ್ ರೈಲು ಬೇಕು ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಳಿದರು. ಹಾಸನ ಭಾಗದ ಪ್ರವಾಸಿಗರು ಉತ್ತರ ಕನ್ನಡ-ದಕ್ಷಿಣ ಕನ್ನಡ ಪ್ರವಾಸಿ ತಾಣಗಳಿಗೆ ತೆರಳಲು ಅನುಕೂಲವಾಗುವಂತೆ ರೈಲು ಬೇಕು ಎಂದು ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಡಿಕೆ ಮಂಡಿಸಿದರು.
ಎಲ್ಲರನ್ನೂ ಸಮಾಧಾನ ಮಾಡುವ ತಂತ್ರಕ್ಕೆ ಮೊರೆಹೋದ ರೈಲ್ವೆ ಸಚಿವರು, ಮಡಗಾಂವ್-ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ರೈಲನ್ನೇ ಯಶವಂತಪುರ ವರೆಗೆ ವಿಸ್ತರಿಸಿದರು. ಈ ರೈಲಿನಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ ಪ್ರವಾಸಿಗರಿಗೆ ಬೆಂಗಳೂರು ಮತ್ತು ಗೋವಾಗೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಿಕೊಟ್ಟಿದ್ದಾಗಿಯೂ ಹೇಳಿದರು. ಅದರ ಜೊತೆ ಜೊತೆ ಈ ಮಾರ್ಗದ ಸಂಸದರನ್ನೂ ಸಮಾಧಾನ ಪಡಿಸಿದರು. ಆದರೆ, ಮಂಗಳೂರಿನ ಜನರ ಮೂಲಬೇಡಿಕೆಯನ್ನು ಮಾತ್ರ ಈಡೇರಿಸಲಿಲ್ಲ.


