Connect with us

ಇತರ

ಕಂದಾಯ ನೀರಿಕ್ಷಕ ಚಂದ್ರ ನಾಯ್ಕ್ ರ ಮಾನವೀಯತೆ… ರೋಟರಿ ಕ್ಲಬ್ ನವರಿಂದ ಸನ್ಮಾನ.

Published

on

ಉಪ್ಪಿನಂಗಡಿ: ಮಳೆಗೆ ಮನೆ ಕುಸಿದು ಬೀದಿಗೆ ಬಿದ್ದ ನಿರ್ಗತಿಕ ಕುಟುಂಬಕ್ಕೆ ರೋಟರಿ ಕ್ಲಬ್ ಉಪ್ಪಿನಂಗಡಿ ಆಸರೆಯಾಗಿದ್ದು, ತ್ವರಿತವಾಗಿ ಸರ್ಕಾರದ ಪರಿಹಾರ ದೊರಕಿಸಿಕೊಟ್ಟ ಕಂದಾಯ ನಿರೀಕ್ಷಕರನ್ನು ಸನ್ಮಾನಿಸಿದೆ.

 
ರಾಮನಗರದ ನಿವಾಸಿಗಳಾದ ಲೀಲಾ ಹಾಗೂ ಅವರ ವಿಧವೆ ಸಹೋದರಿ ಗುಲಾಬಿ, ಇಬ್ಬರು ಚಿಕ್ಕ ಮಕ್ಕಳು ಮತ್ತು ಪಕ್ಷಾಘಾತ ಕಾಯಿಲೆಯಿಂದ ಬಳಲುತ್ತಿರುವ ಸಹೋದರ ನಾರಾಯಣ ಅವರೊಂದಿಗೆ ಅತ್ಯಂತ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಮನೆಯ ಛಾವಣಿ ಸಂಪೂರ್ಣ ಕುಸಿದು, ಹಂಚು ಹಾಗೂ ಪಕ್ಕಾಸುಗಳು ಹಾನಿಗೊಳಗಾಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.ಈ ವಿಷಯ ತಿಳಿದ ರೋಟರಿ ಕ್ಲಬ್ ಉಪ್ಪಿನಂಗಡಿ ತಕ್ಷಣ ಸ್ಪಂದಿಸಿ ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಶ್ರೀ ಚಂದು ನಾಯ್ಕ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿತು. ಕುಟುಂಬದ ದುಃಸ್ಥಿತಿಯನ್ನು ಮನಗಂಡ ಚಂದು ನಾಯ್ಕ್ ಅವರು ಮಾನವೀಯ ಕಾಳಜಿ ತೋರಿ, ಯಾವುದೇ ವಿಳಂಬವಿಲ್ಲದೆ ಸರ್ಕಾರದ ವತಿಯಿಂದ ₹1,20,000 ಪರಿಹಾರ ಧನವನ್ನು ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅವರ ಸಮಯೋಚಿತ ಸ್ಪಂದನೆ ಮತ್ತು ಜನಪರ ಸೇವಾ ಮನೋಭಾವದಿಂದ ನಿರ್ಗತಿಕ ಕುಟುಂಬಕ್ಕೆ ಹೊಸ ಆಶಾಕಿರಣ ಮೂಡಿದ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ಚಂದು ನಾಯ್ಕ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಸನ್ಮಾನಿಸಿ ಮಾತನಾಡಿದ Zone 4 ಅಸಿಸ್ಟೆಂಟ್ ಗವರ್ನರ್ ರೋ PHF Dr. ರಾಜಾರಾಂ ಕೆ.ಬಿ, “ಸಮಾಜದ ಸಂಕಷ್ಟದಲ್ಲಿರುವ ಜನರ ನೆರವಿಗೆ ಅಧಿಕಾರಿಗಳು ಮಾನವೀಯತೆಯಿಂದ ಸ್ಪಂದಿಸಿದಾಗ ಮಾತ್ರ ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳನ್ನು ತಲುಪುತ್ತವೆ” ಎಂದರು. ರೋಟರಿ ಅಧ್ಯಕ್ಷ ರೋ ಜಾನ್ ಕೆನ್ಯೂಟ್ ಸ್ವಾಗತಿಸಿ, “ಚಂದು ನಾಯ್ಕ್ ಅವರ ಸೇವೆ ಇತರ ಅಧಿಕಾರಿಗಳಿಗೆ ಮಾದರಿಯಾಗಿದೆ” ಎಂದು ಶ್ಲಾಘಿಸಿದರು. ಮಾಜಿ ಅಧ್ಯಕ್ಷ ರೋ ಇಸ್ಮಾಯಿಲ್ ಇಕ್ವಾಲ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರೋ ಶ್ರೀಕಾಂತ್ ಪಟೇಲ್ ವಂದಿಸಿದರು. ಕೋಶಾಧಿಕಾರಿ ರೋ ಅಬ್ದುಲ್ ರಹಿಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement