Published
18 hours agoon
By
Akkare News
ಧಾರವಾಡದಲ್ಲಿ ನಡೆದ ಆ ಘೋರ ಘಟನೆ ಇಡೀ ಮಾನವಕುಲವೇ ಕಣ್ಣೀರು ಇಡುವಂತೆ ಮಾಡಿದೆ. ಆ ರಸ್ತೆಯಲ್ಲಿ ಹರಿದಿದ್ದು ಕೇವಲ ರಕ್ತವಲ್ಲ, ಒಂದು ಪುಟ್ಟ ಸಂಸಾರದ ನುಚ್ಚುನೂರಾದ ಕನಸುಗಳು! ತಾಯಿ-ಮಗುವಿನ ಮೇಲಿನ ಭೀಕರ ದಾಳಿಯ ಆ ರಕ್ತದ ಮಡುವಿನಲ್ಲಿ, ಪುಟ್ಟ ಕಂದಮ್ಮ ನೇಹಿತ್ ಇನ್ನೂ ಉಸಿರಾಡುತ್ತಿದ್ದ. ಆ ಎಳೆ ಎದೆಯ ಕೊನೆಯ ಒದ್ದಾಟವನ್ನು ನೋಡಿದ ಕ್ಷಣ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರೊಳಗಿದ್ದ ಸೌಮ್ಯ ತಂದೆಯೊಬ್ಬ ಜಾಗೃತನಾಗಿದ್ದ.
ಅಲ್ಲಿ ಅವರಿಗೆ ತಾನು ದೊಡ್ಡ ಐಪಿಎಸ್ ಆಫೀಸರ್ ಎಂಬ ಹಮ್ಮು-ಬಿಮ್ಮು ನೆನಪಿರಲಿಲ್ಲ. ಆಂಬ್ಯುಲೆನ್ಸ್ ಬರಲು ತಡವಾದರೆ ಈ ಜೀವ ಹಾರಿಹೋಗುತ್ತದೆ ಎಂದು ಅರಿತು, ಯಾವುದೇ ಪ್ರೋಟೋಕಾಲ್ ನೋಡದೆ, ತಮ್ಮ ನಡುಗುವ ಕೈಗಳಿಂದ ಆ ರಕ್ತಸಿಕ್ತ ಮಗುವನ್ನು ಎದೆಗಪ್ಪಿಕೊಂಡರು. ತನ್ನ ಸ್ವಂತ ಮಗು ತೊಂದರೆಯಲ್ಲಿದ್ದಾಗ ಒಬ್ಬ ತಂದೆ ಹೇಗೆ ಎದೆ ಒಡೆದು ಓಡುತ್ತಾನೋ, ಹಾಗೆ ಕಮಿಷನರ್ ಶಶಿಕುಮಾರ್ ಅವರು ನೇಹಿತ್‌ನನ್ನು ಎತ್ತಿಕೊಂಡು ಆಸ್ಪತ್ರೆಯ ಕಡೆಗೆ ಧಾವಿಸಿದರು. “ಚಿನ್ನಾ, ಏನೂ ಆಗಲ್ಲ ಕಣೋ… ಕಣ್ಣು ಬಿಡು ಮಗನೇ” ಎಂದು ಒಳಗೊಳಗೇ ಪ್ರಾರ್ಥಿಸುತ್ತಾ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಈಗ ಆ ಪುಟ್ಟ ಕಂದ ನೇಹಿತ್ ಆಸ್ಪತ್ರೆಯ ಬೆಡ್ ಮೇಲೆ ತೀವ್ರ ನಿಗಾ ಘಟಕದಲ್ಲಿದ್ದಾನೆ, ಬದುಕಿ ಬರಲು ಹೋರಾಡುತ್ತಿದ್ದಾನೆ. ಮಗುವನ್ನು ಎತ್ತಿ ಓಡಿದ ಆ ಕಮಿಷನರ್ ಅವರ ಕೈಗಳಲ್ಲಿದ್ದ ಕರುಣೆ ಸುಳ್ಳಾಗದಿರಲಿ. ಆ ಪುಟ್ಟ ಜೀವ ಎದ್ದು ಬಂದು ಮತ್ತೆ ನಗುವಂತಾಗಲಿ. ನೇಹಿತ್ ಆಸ್ಪತ್ರೆಯಿಂದ ಆರೋಗ್ಯವಾಗಿ ಹೊರಬರಲಿ ಎಂದು ನಾವೆಲ್ಲರೂ ಕೈಮುಗಿದು ಪ್ರಾರ್ಥಿಸೋಣ.





