ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ತಿಂಗಳೊಳಗೆ ಬಸ್‌ಗಳಿಗೆ ಬಾಗಿಲು ಅಳವಡಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Published

on

ಮಂಗಳೂರು : ದ.ಕ. ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ಚಲಿಸುವ ಎಲ್ಲಾ ಸಾರ್ವಜನಿಕ ಬಸ್‌ಗಳಲ್ಲಿ ಒಂದು ತಿಂಗಳೊಳಗೆ ಬಾಗಿಲನ್ನು ಅಳವಡಿಸಿ ಅಫಿದಾವಿತ್ ಸಲ್ಲಿಸಲು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2017ರಿಂದ ನೋಂದಣಿಯಾಗುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ಸುಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ಒಂದು ತಿಂಗಳೊಳಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಬಸ್ ಮಾಲಕರು ಅಫಿದಾವಿತ್ ಸಲ್ಲಿಸಬೇಕು ಎಂದು ಡಿಸಿ ಆರ್‌ಟಿಒಗೆ ನಿರ್ದೇಶನ ನೀಡಿದರು.

ಸಾರ್ವಜನಿಕರ ಜೀವರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇದರಲ್ಲಿ ನಿರ್ಲಕ್ಷ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಸ್‌ಗಳಲ್ಲಿ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರಿಂದಲೂ ತೀವ್ರ ಒತ್ತಡ ಬರುತ್ತಿವೆೆ. ಜನಸಂಪರ್ಕ ಸಭೆಗಳಲ್ಲಿಯೂ ಮನವಿಗಳು ಬಂದಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಬಸ್‌ಗಳಲ್ಲಿ ಬಾಗಿಲು ಅಳವಡಿಸಿ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿಯೂ ಸಿಟಿ ಬಸ್‌ಗಳಲ್ಲಿ ಬಾಗಿಲು ಇರುವುದರಿಂದ ಸಾರ್ವಜನಿಕರ ಸಂಚಾರನಿರಾತಂಕವಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯೂ ಸುಗಮವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಫ್ಲೈಓವರ್ ಕತ್ತಲು: ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ
ರಾ.ಹೆ.ಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಸುರತ್ಕಲ್, ಕೂಳೂರು, ಕೊಟ್ಟಾರ ಚೌಕಿ, ಕುಂಟಿಕಾನ, ಪಂಪ್‌ವೆಲ್ ಮೇಲ್ಸೇತುವೆಗಳಲ್ಲಿ ದಾರಿದೀಪದ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಕತ್ತಲು ಆವರಿಸಿರುವ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳಿಂದ ಈ ಸಮಸ್ಯೆ ಇದ್ದರೂ, ರಾ.ಹೆ. ಪ್ರಾಧಿಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮಂಗಳೂರು ಮನಪಾದೊಂದಿಗೂ ಚರ್ಚಿಸಿಲ್ಲ. ಇದರಿಂದ ಹಲವಾರು ಅಪಘಾತಗಳು ಸಂಭವಿಸಿ, ಜೀವಹಾನಿಯಾಗಿರುವ ಘಟನೆಗಳು ನಡೆದಿವೆ.ಹೆದ್ದಾರಿಯ ಮೂಲ ಯೋಜನೆಯಲ್ಲಿಯೇ ಇದನ್ನು ಯಾಕೆ ಸೇರಿಸಿಲ್ಲ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಜಿಲ್ಲಾಧಿಕಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದರು.ಜಿಲ್ಲೆಯ ಹಲವೆಡೆ ವಿವಿಧ ಕಾಮಗಾರಿಗಳಿಗಾಗಿ ಕೆಲವು ಏಜನ್ಸಿಗಳು ಅನುಮತಿ ಇಲ್ಲದೆ ಲೋಕೋಪಯೋಗಿ ರಸ್ತೆಗಳನ್ನು ಅಗೆದು, ಪೈಪ್, ಕೇಬಲ್ ಅಳವಡಿಸಿರುವ ಬಗ್ಗೆ ದೂರುಗಳು ಬಂದಿದೆ. ತಕ್ಷಣ ಅಂತಹವರಿಗೆ ನೊಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.






ಸ್ಟೇಟ್‌ಬ್ಯಾಂಕ್ ವೃತ್ತ ಸಮಸ್ಯೆ
ನಗರದ ಹೃದಯಭಾಗದ ಸ್ಟೇಟ್‌ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ವೃತ್ತವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ವಾಹನ ಸವಾರರು ತೀವ್ರಗೊಂದಲಕ್ಕೀಡಾಗುತ್ತಿದ್ದಾರೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಡಿ.ಸಿ. ಕಚೇರಿಯ ಮುಂದಿನ ವೃತ್ತವೇ ಈ ರೀತಿ ಅನಿಶ್ಚಿತತೆ ಸ್ಥಿತಿಯಲ್ಲಿ ನಿಲ್ಲಿಸಿರುವುದು ಸರಿಯಲ್ಲ. ಈ ವೃತ್ತದ ಸುತ್ತಮುತ್ತಲಿನಲ್ಲಿ ಪಾರ್ಕಿಂಗ್, ಫ್ಲೆಕ್ಸ್, ಕಟೌಟ್ ಸಮಸ್ಯೆಯೂ ಇದೆ. ಯಾವುದೇ ಸ್ಮಾರ್ಟ್‌ಸಿಟಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಇನ್ನೊಂದು ಸಮಸ್ಯೆ ಸೃಷ್ಟಿಯಾಗಬಾರದು. ಈ ನಿಟ್ಟಿನಲ್ಲಿ ನಗರಪಾಲಿಕೆ, ನಗರ ಪೊಲೀಸ್ ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಸಮನ್ವಯದಿಂದ ಸ್ಟೇಟ್ ಬ್ಯಾಂಕ್ ವೃತ್ತ ಸಂಚಾರ ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥ ಮಾಡಬೇಕು ಎಂದು ಸೂಚಿಸಿದರು. ನಗರದ ಲೇಡಿಹಿಲ್, ಕಂಕನಾಡಿ, ವೆಲೆನ್ಸಿಯಾ ಮತ್ತಿತರ ಕಡೆ ಸಂಜೆಯಾಗುತ್ತಿದ್ದಅತೆ ಹಳೆಯ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಅದರಲ್ಲಿ ತಿಂಡಿ ತಿನಿಸು ಮಾರಾಟ ಮಾಡಲಾಗುತ್ತಿದೆ. ರಸ್ತೆ, ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡಲಾಗುತ್ತಿದ್ದು, ಇಲ್ಲಿಗೆ ಬರುವ ಗ್ರಾಹಕರ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ದೂರು ವ್ಯಕ್ತವಾಯಿತು. ಈ ಬಗ್ಗೆ ತಪಾಸಣೆ ನಡೆಸಿ ಕ್ರಮಕೈಗೊಳ್ಳುವಂತೆ ಮಹಾನಗರಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಆನಂದ್, ಆರ್‌ಟಿಒ ಶ್ರೀಧರ್ ಮಲ್ನಾಡ್, ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಇಂಜಿನಿಯರ್ ಅಮರನಾಥ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version