Published
6 months agoon
By
Akkare Newsಬಂಟ್ವಾಳ: ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ ಜೀವನದಿ ನೇತ್ರಾವತಿ ನದಿಗೆ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು (ಬ್ರಿಡ್ಜ್ ಕಂ ಬ್ಯಾರೇಜ್) ಪೂರ್ಣಗೊಂಡಿದ್ದು, ಇದು ಎರಡು ಊರಿಗೆ ಬೆಸುಗೆಯಾಗಲಿದೆ ಹಾಗೂ ನೀರಿಗೆ ಆಸರೆಯಾಗಲಿದೆ.
ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಗೇಟ್ ಅಳವಡಿಕೆ ನಡೆಸಿರುವ ಇಲಾಖೆ, ಅದರ ಹಿನ್ನೀರಿನ ಡ್ರೋನ್ ಪೋಟೋಗಳನ್ನು ಸೆರೆ ಹಿಡಿ ದಿದೆ. ಯೋಜನೆ ಯಾವಾಗ ಉದ್ಘಾ ಟನೆಗೊಳ್ಳಲಿದೆ ಎಂಬ ಮಾಹಿತಿ ಇಲ್ಲ.
ಈ ಯೋಜನೆಗೆ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪಾಡಿ ಗುತ್ತು ಅವರ ಪ್ರಸ್ತಾವನೆಯಂತೆ ಅನುದಾನ ಮಂಜೂರಾಗಿತ್ತು. ಇದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಹಾಗೂ ನರಿಕೊಂಬು ಗ್ರಾಮಗಳನ್ನು ಸಂಪರ್ಕಿಸಲಿದೆ.
166ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯ
ಅಣೆಕಟ್ಟು 351.25 ಮೀ. ಉದ್ದ ಹಾಗೂ 5.50 ಮೀ. ಎತ್ತರವಿದ್ದು, ಪೂರ್ತಿ ಗೇಟ್ ಅಳವಡಿಸಿದರೆ 166 ಎಂಸಿಎಫ್‌ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸುತ್ತದೆ. ಸೇತುವೆಯ ಅಗಲ 7.50 ಮೀ. ಇದ್ದು, 21 ಕಿಂಡಿಗಳಿವೆ. 12 ಮೀ. ಅಗಲದ ವರ್ಟಿಕಲ್ ಲಿಫ್ಟ್ ಗೇಟ್‌ಗಳಿದ್ದು, ಮಧ್ಯದಲ್ಲಿ ಎರಡು ಸ್ಕವರ್ ಸ್ಲೂಯಿಸ್ ಗೇಟ್‌ಗಳಿರುತ್ತವೆ.
ತುರ್ತು ಪ್ರವಾಹದ ಸಂದರ್ಭ ನೀರನ್ನು ಕೆಳಕ್ಕೆ ಕಳುಹಿಸುವ ಉದ್ದೇಶದಿಂದ ಸ್ಕವರ್ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಇದು ಲಿಫ್ಟ್ ಗೇಟ್‌ಗಳಿಗಿಂತ ತೀರಾ ಕೆಳಸ್ತರದಲ್ಲಿರುತ್ತದೆ. ಹೀಗಾಗಿ ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಕೂಡ ಹೊರಕ್ಕೆ ಕಳುಹಿಸಲು ಅನುಕೂಲವಾಗುತ್ತದೆ -ಶಿವಪ್ರಸನ್ನಇಲಾಖೆಯ ಸಹಾಯಕ ಎಂಜಿನಿಯರ್