Published
5 months agoon
By
Akkare Newsಬೆಂಗಳೂರು ,ಜು.27- ಬೆಂಗಳೂರು ಮಹಾನಗರದ ಸಮಸ್ಯೆಗಳು ಹಾಗೂ ಅದರ ಪರಿಹಾರಗಳ ಬಗ್ಗೆ ಪಕ್ಷಬೇಧ ಮರೆತು ಎಲ್ಲಾ ಜನಪ್ರತಿನಿಧಿಗಳು ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ವಿಧಾನಸೌಧದಲ್ಲಿಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆದ ಸಭೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಚಿವರಾದ ಜಮೀರ್ ಅಹಮದ್ಖಾನ್, ಬಿಜೆಪಿಯ ಶಾಸಕರಾದ ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಗೋಪಾಲಯ್ಯ, ಭೈರತಿ ಬಸವರಾಜು, ಮುನಿರತ್ನ, ರಾಮಮೂರ್ತಿ, ರವಿ ಸುಬ್ರಹಣ್ಯ, ದಾಸರಹಳ್ಳಿಯ ಮುನಿರಾಜು, ಕಾಂಗ್ರೆಸ್ನ ಬಿಡಿಎ ಅಧ್ಯಕ್ಷರೂ ಆಗಿರುವ ಎನ್.ಎ.ಹ್ಯಾರಿಸ್, ಆನೇಕಲ್ ಕ್ಷೇತ್ರದ ಶಿವಣ್ಣ, ಎ.ಸಿ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಸುಧಾಂದಾಸ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ವಿರೋಧಪಕ್ಷಗಳ ಶಾಸಕರಲ್ಲಿ ಅಸಮಾಧಾನಗಳಿವೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಬೆಂಗಳೂರಿನ ಅಭಿವೃದ್ಧಿ ಹಾಗೂ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬೆಂಗಳೂರಿನ ಶಾಸಕರ ಸಭೆ ಕರೆಯುವುದಾಗಿ ವಿಧಾನಸಭೆಯಲ್ಲಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಅದರಂತೆ ಇಂದು ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಪಕ್ಷಭೇದ ಮರೆತು ಎಲ್ಲರೂ ಪರಸ್ಪರ ಆತೀಯತೆಯಿಂದ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು. ಆರ್.ಅಶೋಕ್, ಡಿ.ಕೆ.ಶಿವಕುಮಾರ್ ಅಕ್ಕಪಕ್ಕ ಕುಳಿತು ಬೆಂಗಳೂರು ಮಹಾನಗರದ ಅಭಿವೃದ್ಧಿಯ ಕುರಿತು ಸಮಾಲೋಚನೆ ನಡೆಸಿದರು.
ಬ್ರ್ಯಾಂಡ್ ಬೆಂಗಳೂರು ಎಂಬುದು ಕೇವಲ ಹೆಸರಿಗೆ ಸೀಮಿತ ಆಗಬಾರದು. ಈ ಹಿಂದೆ ಬಿಬಿಎಂಪಿಯನ್ನು ರಚನೆ ಮಾಡಿ ವಾರ್ಡ್ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಿದಾಗಲೇ ಬಿಜೆಪಿ ವಿರೋಧ ಮಾಡಿತ್ತು. ಈಗಲೂ ಹೊರವಲಯದ ಬೆಂಗಳೂರು ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಸೊರಗುತ್ತಿದೆ.
ಇಂತಹ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ರಚನೆ ಮಾಡುವುದು ಅನಗತ್ಯ ಎಂದು ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಬಸವರಾಜು ಬೊಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಈಗ ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ಹಣ ನೀಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಕನಿಷ್ಟ 25 ಕೋಟಿ ರೂ.ಗಳ ಅನುದಾನ ಒದಗಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.ಬ್ರ್ಯಾಂಡ್ ಬೆಂಗಳೂರು ಯೋಜನೆಗಾಗಿ ಸಾಕಷ್ಟು ಸಮಾಲೋಚನೆ ಹಾಗೂ ಅಧ್ಯಯನ ನಡೆಸಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಬೆಂಗಳೂರಿನಲ್ಲಿ ಮೂಲಸೌಲಭ್ಯಗಳನ್ನು ನಿರ್ಮಿಸಬೇಕಿದೆ. ಜೊತೆಗೆ ಅಂತಹ ಸೌಲಭ್ಯಗಳನ್ನು ಕಲ್ಪಿಸಲು ಬ್ರ್ಯಾಂಡ್ ಬೆಂಗಳೂರು ಕಲ್ಪನೆಯನ್ನು ವಿನ್ಯಾಸಗೊಳಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿವರಿಸಿದರು.
ಭಾರತದಲ್ಲಿ ಹಲವು ಕಡೆ ವಿವಿಧ ಅತೀ ಎತ್ತರದ ನಿರ್ಮಾಣ ಯೋಜನೆಗಳು ಚಾಲ್ತಿಯಲ್ಲಿವೆ. ಮುಂಬೈನ ಓಷ್ಯನ್ ಟವರ್ನಲ್ಲಿ 331 ಮೀಟರ್, ಪೆಲಾಯಿಸ್ ರಾಯಲ್ನಲ್ಲಿ 320, ಆರಾಧ್ಯ ಅವಾನ್ ಟವರ್-1 307 ಮೀಟರ್, ಸೆಂಚುರಿ ಐಟಿ ಪಾರ್ಕ್ ಟವರ್ 300 ಮೀಟರ್, ಆರಾಧ್ಯಅವಾನ್ ಟವರ್ 295 ಮೀಟರ್ ಎತ್ತರದಲ್ಲಿ ನಿರ್ಮಿಸುವ ಪ್ರಸ್ತಾವಿತ ಯೋಜನೆಗಳಿವೆ ಎಂದು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಲಾಗಿದೆ.
ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಆಕಾಶ ಗೋಪುರ ನಿರ್ಮಾಣದಿಂದ ನಗರದ ಆಧುನಿಕತೆಯನ್ನು ಸಂಭ್ರಮಿಸಲು ಸಾಧ್ಯವಾಗಲಿದೆ. ಇದರಿಂದ ಬೆಂಗಳೂರಿನ ಆಕರ್ಷಣೆ ಹೆಚ್ಚಾಗಿ ಪ್ರವಾಸೋದ್ಯಮ ಉತ್ತೇಜನಗೊಳ್ಳಲಿದೆ. ಆದಾಯ ಹಾಗೂ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ವಿವರಿಸಲಾಗಿದೆ.
200 ಕಿ.ಮೀ.ವರೆಗೂ ಹೆಚ್ಚಿನ ಹೊಸ ರಸ್ತೆಗಳ ನಿರ್ಮಾಣ, ಸುರಂಗ ರಸ್ತೆ, ಮೇಲು ಸೇತುವೆ, ಸಂಚಾರ ನಿರ್ವಹಣೆಗೆ ಒತ್ತು ನೀಡುವುದರ ಜೊತೆಗೆ ಬೆಂಗಳೂರಿನಲ್ಲಿ ಸಮೂಹ ಸಾರಿಗೆ, ಸೈಕಲ್ ಬಳಕೆಯನ್ನು ಉತ್ತೇಜಿಸುವ ಚರ್ಚೆಗಳು ನಡೆದಿವೆ.ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯ ಮೂಲಕ ನಗರ ಸೌಂದರ್ಯೀಕರಣವನ್ನು ಹೆಚ್ಚಿಸಲು ಹಾಗೂ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಪ್ರಸ್ತಾವಿತ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಕೈಗೊಳ್ಳಬೇಕಾದ ಕ್ರಮಗಳು, ಹೊರವಲಯದ ಮೂಲಸೌಕರ್ಯ ಅಭಿವೃದ್ಧಿ, ವಸತಿ ಯೋಜನೆಗಳು, ಶಿಕ್ಷಣ, ಆರೋಗ್ಯ ಸುಧಾರಣೆ ಮತ್ತಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.