Published
5 months agoon
By
Akkare Newsಸುಬ್ರಹ್ಮಣ್ಯ : ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಹಗಲ್‌ನ ರೈಲು ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದ ದುರಸ್ತಿ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಸ್ಥಳದಲ್ಲಿ ರೈಲು ಎಂಜಿನ್ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕ್ಷಣದಿಂದ ದುರಸ್ಥಿ ಕಾರ್ಯಗಳನ್ನು ಆರಂಭಿಸಲಾಗಿದ್ದು, ಶನಿವಾರ ಭೂಕುಸಿತದ ಸ್ಥಳದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿತ್ತು.
ಹಳಿ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ಭರದಿಂದ ನಡೆಯುತ್ತಿದೆ.
ಕೆಳಭಾಗದಿಂದಲೇ ಬಂಡೆಗಳನ್ನು ಜೋಡಿಸಿ, ಕಬ್ಬಿಣದ ನೆಟ್ ಬಳಸಿ ಗೋಡೆ ನಿರ್ಮಿಸಲಾಗಿದೆ. ಇದರ ಮೇಲೆ ಇನ್ನೊಂದು ಹಂತದಲ್ಲಿ ಬಂಡೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಕಾಮಗಾರಿ ಬಹುತೇಕ ಅಂತಿಮಗೊಂಡ ಹಿನ್ನೆಲೆಯಲ್ಲಿ ಒಂದು ರೈಲು ಎಂಜಿನ್ ಅನ್ನು ಪ್ರಾಯೋಗಿಕವಾಗಿ ನಿಧಾನವಾಗಿ ಸಂಚರಿಸಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ದುರಸ್ಥಿ ಕಾರ್ಯ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ರವಿವಾರ ಪ್ರಾಯೋಗಿಕವಾಗಿ ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ.
‘
ದುರಸ್ಥಿ ಕಾರ್ಯ ನಡೆಯುತ್ತಿರುವ ಸ್ಥಳ ಹಾಗೂ ಆಸುಪಾಸಿನಲ್ಲಿ 15 ಕಿ.ಮೀ. ವೇಗದಲ್ಲಿ ಗೂಡ್ಸ್ ರೈಲು ಪ್ರಾಯೋಗಿಕ ಓಡಾಟಕ್ಕೆ ಸದ್ಯಕ್ಕೆ ಅನುಮತಿ ನೀಡಲಾಗಿದೆ ಎನ್ನಲಾಗಿದ್ದು, ಆದರೆ ರೈಲ್ವೇ ಇಲಾಖೆಯಿಂದ ಅಧಿಕೃತಗೊಂಡಿಲ್ಲ.
ದುರಸ್ತಿ ಕಾರ್ಯ ಪೂರ್ಣಗೊಂಡ ನಡೆದ ಬಳಿಕ ಪ್ರಯಾಣಿಕರ ರೈಲು ಸಂಚಾರಕ್ಕೂ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆ ಇದೆ.