ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಂಪುಟ ಅಸ್ತು 20 ಲಕ್ಷ ವಿದೇಶಿ ಪ್ರವಾಸಿಗರು, 1,500 ಕೋಟಿ ರೂ. ಹೂಡಿಕೆ ಸೆಳೆಯುವ ಗುರಿ ಕೊಡಗಿನ ಪ್ರವಾಸೋದ್ಯಮಕ್ಕೆ ಸಿಗಲಿದೆ ಹೆಚ್ಚು ಅವಕಾಶಗಳು…

Published

on

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಹೆಚ್​ಕೆ ಪಾಟೀಲ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ 1,500 ಕೋಟಿ ರೂಪಾಯಿಗಳ ಹೂಡಿಕೆ ಆಕರ್ಷಿಸಲು ಸರ್ಕಾರ ಉದ್ದೇಶಿಸಿದೆ. ಕರ್ನಾಟಕವು ವರ್ಷಕ್ಕೆ 20 ಲಕ್ಷ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಉದ್ದೇಶಿಸಿದೆ. ಆ ಮೂಲಕ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಐದು ರಾಜ್ಯಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

 

ಪ್ರವಾಸೋದ್ಯಮ ವಿಚಾರದಲ್ಲಿ ದೇಶೀಯ ಪ್ರವಾಸಿಗರನ್ನು ಸೆಳೆಯುವುದು ಕೂಡ ನಮ್ಮ ಗುರಿಯಾಗಿದೆ. 48 ಕೋಟಿ ಸ್ಥಳೀಯ ಪ್ರವಾಸಿಗರನ್ನು ಸೆಳೆಯುವ ಗುರಿಯೊಂದಿಗೆ ಅಗ್ರ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆಯಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಸ್ತೃತ ಚರ್ಚೆಯ ನಂತರ ಸಚಿವ ಸಂಪುಟವು ‘ಕರ್ನಾಟಕ ಪ್ರವಾಸೋದ್ಯಮ ನೀತಿ 2024-29’ ಅನ್ನು ಅನುಮೋದಿಸಿದೆ. ಈ ನೀತಿಯಡಿಯಲ್ಲಿ ಸಹಾಯಧನ ಮತ್ತು ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಏನೇನಿದೆ?
ಹೊಸ ಪ್ರವಾಸೋದ್ಯಮ ನೀತಿಯು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಯಸುತ್ತದೆ.
ಅಡ್ವೆಂಚರ್ ಟೂರಿಸಂ, ಕೃಷಿ, ಕಾರವಾನ್, ಕರಾವಳಿ, ಕಡಲತೀರ, ಪಾಕಪದ್ಧತಿ, ಸಾಂಸ್ಕೃತಿಕ, ಸಾಂಪ್ರದಾಯಿಕ, ಪರಿಸರ, ಶಿಕ್ಷಣ, ಚಲನಚಿತ್ರ, ಗಾಲ್ಫ್, ಕ್ರೀಡೆ, ಬುಡಕಟ್ಟು, ಮದುವೆಯ ತಾಣಗಳ ಅಭಿವೃದ್ಧಿ, ಆರೋಗ್ಯ ವಿಚಾರಗಳಿಗೆ ಉತ್ತೇಜನ ನೀಡುವ ಬಗ್ಗೆ ಹೊಸ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೊಡಗಿನಲ್ಲಿ ಕೂಡ ಎಲ್ಲಾ ಚಟುವಟಿಕೆಗಳಿಗೆ ಸರಕಾರದಿಂದ ಉತ್ತೇಜನ ದೊರಕುವ ನಿರೀಕ್ಷೆ ಇದೆ.

ಪ್ರವಾಸೋದ್ಯಮ ಉತ್ತೇಜನಕ್ಕೆ 46 ಯೋಜನೆಗಳು
ಅಪಾರ್ಟ್‌ಮೆಂಟ್, ಹೋಟೆಲ್, ಸರ್ವೀಸ್ ಅಪಾರ್ಟ್‌ಮೆಂಟ್‌ಗಳು, ಅಕ್ವೇರಿಯಂ, ಬೀಚ್ ಶಾಕ್‌ಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಸಹಿತ ಪ್ರವಾಸೋದ್ಯಮ ಉತ್ತೇಜನಕ್ಕೆ 46 ಯೋಜನೆಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಹೊಸ ನೀತಿಯಿಂದ ಕೊಡಗು ಜಿಲ್ಲೆಯಲ್ಲಿ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸಲು ಇನ್ನು ಮುಂದೆ ಸರ್ಕಾರದ ಉತ್ತೇಜನ ದೊರಕಲಿದೆ. ಸದ್ಯದಲ್ಲೇ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ಇವೆಲ್ಲದರ ಬಗ್ಗೆ ಮಾಹಿತಿಗಳು ದೊರಕಲಿದ್ದು ಅಸಕ್ತರು ಈ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

 

ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಮೊದಲ ಐದು ರಾಜ್ಯಗಳಲ್ಲಿ ಒಂದಾಗಲು, ನಾವು ವರ್ಷಕ್ಕೆ 20 ಲಕ್ಷ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬೇಕು. ಇದನ್ನು ತಲುಪುವುದು ನಮ್ಮ ಗುರಿಯಾಗಿದೆ. ಈಗ ಸುಮಾರು 12-14 ಲಕ್ಷ ವಿದೇಶಿ ಪ್ರವಾಸಿಗರು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version