Published
1 month agoon
By
Akkare Newsಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತನ್ನ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ (ನ.7) ಅನುಮತಿ ನೀಡಿದೆ.
ಪರಸ್ಪರ ರಾಜಿ ಸಂಧಾನ ಅಥವಾ ಮಾತುಕತೆಯ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ರೋಹಿಣಿ ಸಿಂಧೂರಿ ಮತ್ತು ರೂಪಾ ಮೌದ್ಗಿಲ್ ಅವರಿಗೆ ನ್ಯಾಯಾಲಯ ಸಮಯಾವಕಾಶ ನೀಡಿತ್ತು. ಆದರೆ, ದೂರು ದಾಖಲಿಸಿರುವ ರೋಹಿಣಿ ಸಿಂಧೂರಿ ರಾಜಿ ಇತ್ಯರ್ಥಕ್ಕೆ ಒಪ್ಪಿಲ್ಲ.
ಆದ್ದರಿಂದ, ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಅರ್ಜಿ ವಾಪಸ್ ಪಡೆಯಲು ರೂಪಾ ಅವರಿಗೆ ಅನುಮತಿಸಿದೆ.
ಮೌದ್ಗಿಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಇಬ್ಬರ ನಡುವಿನ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆದಾರರನ್ನು ನೇಮಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಸಿಂಧೂರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ‘ತಮ್ಮ ಕಕ್ಷಿದಾರೆಯ ಘನತೆಗೆ ಅಪಾರ ಹಾನಿಯಾಗಿದೆ’ ಎಂದಿದ್ದಾರೆ.
ರೋಹಿಣಿ ಸಿಂಧೂರಿ ಅವರ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರಲಾಗಿದೆ. ರೋಹಿಣಿ ಅವರಿಗೆ ಸಂಬಂಧಿಸಿದ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ. ಆ ಮಾಹಿತಿ ಇನ್ನೂ ಸಾರ್ವಜನಿಕವಾಗಿ ಲಭ್ಯವಿದೆ. ರಾಜಿಸೂತ್ರದ ಪ್ರಸ್ತಾಪ ಬೇಡ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದ ಸಿಂಧೂರಿ, ತನಗೆ ರಾಜಿ ಸಂಧಾನದಲ್ಲಿ ಆಸಕ್ತಿ ಇಲ್ಲ. ಅರ್ಹತೆಯ ಆಧಾರದ ಮೇಲೆ ಪ್ರಕರಣ ನಿರ್ಧರಿಸಬೇಕು ಎಂದು ಕೋರಿದ್ದಾರೆ.
ವಿಚಾರಣೆ ವೇಳೆ, ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಆರೋಪದ ಹಿಂದಿನ ಉದ್ದೇಶವಾದರೂ ಏನು? ಎಂದು ರೂಪಾ ಅವರನ್ನು ನ್ಯಾಯಾಲಯ ಪ್ರಶ್ನಿಸಿದೆ. ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ರೂಪಾ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯೇ? ಸಂಬಂಧವಿಲ್ಲದ ಹೇಳಿಕೆ ನೀಡಿದರೆ ಅದು ಮಾನಹಾನಿಕರವಲ್ಲವೇ ಎಂದು ಕೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ರೂಪಾ ಪರ ವಕೀಲ ಆದಿತ್ಯ ಸೋಂಧಿ, ಸಿಂಧೂರಿ ಅವರ ಕರ್ತವ್ಯಲೋಪಗಳ ಕುರಿತು ರೂಪಾ ಗಮನ ಸೆಳೆದಿದ್ದಾರೆ ಎಂದು ಸಮಜಾಯಿಸಿ ನೀಡಿದ್ದಾರೆ. ಇದನ್ನು ಒಪ್ಪಿಕೊಳ್ಳದ ನ್ಯಾ. ಅಮಾನುಲ್ಲಾ ಅವರು, ಇಲಾಖೆ ವ್ಯಾಪ್ತಿಯಲ್ಲೇ ರೂಪಾ ದೂರು ನೀಡಬಹುದಿತ್ತು. ಪರಸ್ಪರ ಮುಗಿಬೀಳಲು ಹೊರಟಿದ್ದಾರೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪ್ರತಿಯೊಂದು ಅಂಶವೂ ನಿಮಗೆ ತಿಳಿದಿದೆ ಅಲ್ಲವೇ? ಆದರೂ ನೀವು ಇದನ್ನು ಮಾಡಿದ್ದೀರಿ ಎಂದು ಹೇಳಿದ್ದಾರೆ.
ನ್ಯಾಯಾಲಯ ಸಮಯಾವಕಾಶ ನೀಡಿದರೂ, ಇಬ್ಬರ ನಡುವೆ ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗದ ಕಾರಣ, ಮೊಕದ್ದಮೆ ರದ್ದುಪಡಿಸುವಂತೆ ಕೋರಿದ್ದ ಅರ್ಜಿ ಹಿಂಪಡೆಯುವುದಾಗಿ ರೂಪಾ ಪರ ವಕೀಲ ಸೋಂಧಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ನ್ಯಾಯಾಲಯ ರೂಪಾ ಮೌದ್ಗಿಲ್ ಅವರಿಗೆ ಮನವಿ ಹಿಂಪಡೆಯಲು ಅನುಮತಿ ನೀಡಿದೆ.