Published
3 months agoon
By
Akkare News
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟ ಮುಂದುವರಿದಿದ್ದು, ಇದೀಗ ಟ್ರಂಪ್ ಅವರ ಕಣ್ಣು ಭಾರತದ ಅಕ್ಕಿಯ ಮೇಲೆ ಬಿದ್ದಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಕ್ಕಿ ಬೆಲೆ ಹೆಚ್ಚಾಗಬಹುದೇ ಎನ್ನುವ ಆತಂಕವೂ ಸಹ ಶುರುವಾಗಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿವಿಧ ವಸ್ತುಗಳ ಮೇಲೆ ಈಗಾಗಲೇ ಭಾರೀ ಸುಂಕ ವಿಧಿಸಿ ಆಗಿದೆ. ಇದೀಗ ಅಕ್ಕಿಯನ್ನು ತಂದು ಇಲ್ಲಿ ಸುರಿಯಬೇಡಿ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಅಮೇರಿಕಾದ ಹಲವು ಸಂಸ್ಥೆಗಳು ಭಾರತದೊಂದಿಗೆ ಸುಧಾರಣೆ ಮಾಡಿಕೊಳ್ಳಬೇಕು, ಒಳ್ಳೆಯ ಸಂಬಂಧ ಉಳಿಸಿಕೊಳ್ಳಬೇಕು ಎಂದು ಹೇಳುತ್ತಿವೆ. ಆದರೆ, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಳಿಗೆಗೊಂದು ಮಾತನಾಡುವುದನ್ನು ಮುಂದುವರಿಸಿದ್ದು, ಭಾರತದ ಮೇಲೆ ಹೊಸ ಹಾಗೂ ದೊಡ್ಡ ತೆರಿಗೆ ವಿಧಿಸುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಭಾರತ ಸೇರಿದಂತೆ ಕೆಲವೊಂದು ದೇಶಗಳಿಂದ ಹೆಚ್ಚು ಅಕ್ಕಿಯನ್ನು ಅಮೇರಿಕಾಗೆ ರಫ್ತು ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕು. ಅಮೇರಿಕಾಗೆ ಅಕ್ಕಿ ತಂದು ಸುರಿಯುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಚೆಗೆ ನಡೆದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಭಾರತಕ್ಕೆ ಹೊಸ ಸುಂಕ ಬೆದರಿಕೆ ಹಾಕಿರುವ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ನಿಧಾನಗತಿಯಲ್ಲಿದೆ ಎಂದಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈಚೆಗೆ ಭಾರತಕ್ಕೆ ಭೇಟಿ ನೀಡಿದ ಮೇಲೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಅಲ್ಲದೇ ರಷ್ಯಾದಿಂದ ಭಾರತಕ್ಕೆ ಆಮದು ಆಗುತ್ತಿರುವ ಕಚ್ಚಾ ತೈಲ ಸೇರಿದಂತೆ ಯಾವುದೇ ವಸ್ತುಗಳನ್ನು ಬೇಕಾದರೂ ಅಗತ್ಯ ಪ್ರಮಾಣದಲ್ಲಿ ಭಾರತಕ್ಕೆ ಕೊಡುವುದಾಗಿ ರಷ್ಯಾ ಹೇಳಿದೆ. ರಷ್ಯಾದಿಂದ ತೈಲ ಖರೀದಿ ಮಾಡಬಾರದು ಹಾಗೂ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸಿದರೆ ಇನ್ನಷ್ಟು ಸುಂಕವನ್ನು ಭಾರತದ ಮೇಲೆ ವಿಧಿಸಬೇಕಾಗುತ್ತದೆ ಎಂದು ಭಾರತದ ಮೇಲೆ ಅಮೇರಿಕಾ ನಿರಂತರವಾಗಿ ಒತ್ತಡ ಹೇರುತ್ತಲ್ಲೇ ಇದೆ. ಆದರೆ ಅಮೇರಿಕಾದ ಬೆದರಿಕೆಗಳನ್ನು ಭಾರತವು ಗಂಭೀರವಾಗಿ ತೆಗೆದುಕೊಂಡೇ ಇಲ್ಲ.