Published
3 months agoon
By
Akkare News
ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಕಳೆದ ಅಕ್ಟೋಬರ್ ತಿಂಗಳಲ್ಲೇ ಕರಡು ರಚಿಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಶಾಸಕ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಯಾವುದೇ ಲಂಚವಿಲ್ಲದೆ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕ ಭೂ ಕಂದಾಯ ಕಾಯ್ದೆ ಜಾರಿಯಾಗಿದ್ದರೂ ಈ ಹಿಂದೆ ಅಗತ್ಯ ತಿದ್ದುಪಡಿ ಆಗಿರಲಿಲ್ಲ. ಆದರೆ ಪ್ರಸ್ತುತ ಅತ್ಯಧಿಕ ಹಾಗೂ ಅಗತ್ಯ ತಿದ್ದುಪಡಿಗಳನ್ನು ತರಲಾಗುತ್ತಿದೆ. ಕಲಂ 95ರಕ್ಕೆ ಸಾಕಷ್ಟು ತಿದ್ದುಪಡಿ ಮಾಡಲಾಗಿದ್ದು, ಕಳೆದ ಅಕ್ಟೋಬರ್ 20ರಂದೇ ಕರಡು ರಚಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಜನರಿಗೆ ಅನುಕೂಲವಾಗಲು ಭೂ ಪರಿವರ್ತನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗಿದೆ ಎಂದಿದ್ದಾರೆ.
ಮಧ್ಯವರ್ತಿಗಳಿಗೆ ಬ್ರೇಕ್ ಹಲವು ವರ್ಷಗಳಿಂದಲೂ ಭೂ ಪರಿವರ್ತನೆ ಎಂಬುದೇ ಹಗರಣವಾಗಿತ್ತು. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೋ ಇಲ್ಲವೋ ನಮಗೆ ತಿಳಿದಿಲ್ಲ. ಆದ್ರೆ ಮಧ್ಯವರ್ತಿಗಳಂತೂ ಹುಟ್ಟಿಕೊಂಡಿದ್ದಾರೆ. ಇದರಿಂದ ಅಧಿಕಾರಿಗಳಿಗೂ ಕೆಟ್ಟ ಹೆಸರು, ಸರ್ಕಾರಕ್ಕೂ ಕೆಟ್ಟ ಹೆಸರು. ಹೀಗಾಗಿ ಈ ಭೂ ಪರಿವರ್ತನೆ ದಂಧೆಗೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹತ್ವದ ತಿದ್ದುಪಡಿ ಮಾಡಲಾಗಿದೆ ಎಂದಿದ್ದಾರೆ.