Published
17 hours agoon
By
Akkare News
ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧೀ ಕಟ್ಟೆ ಸಮಿತಿ, ತುಳು ಕೂಟ ಹಾಗೂ ತುಳು ಅಪ್ಪೆಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಗಾಂಧೀ ಜಯಂತಿ ಆಚರಣೆಯು ಅ.2ರಂದು ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಪುತ್ತೂರಿನ ಎಂಟು ರೋಟರಿ ಕ್ಲಬ್‌ಗಳ ನೇತೃತ್ವದಲ್ಲಿ ಸ್ವಚ್ಛ ಭಾರತ, ಸುಂದರ ಭಾರತ, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಉದ್ದೇಶದಲ್ಲಿ ಜನರಲ್ಲಿ ಸ್ವಚ್ಚತೆಯ ಜಾಗೃತಿ ಮೂಡಿಸುವ ಸ್ವಚ್ಚತಾ ಜಾಥಾ ನಡೆಯಿತು. ದರ್ಬೆ ಹಾಗೂ ಬೊಳುವಾರು ವೃತ್ತದ ಬಳಿಯಿಂದ ಏಕಕಾಲದಲ್ಲಿ ಹೊರಟ ಸ್ವಚ್ಚತಾ ಜಾಥಾವು ಗಾಂಧೀಕಟ್ಟೆಯ ಬಳಿ ಸಮಾಪನಗೊಂಡಿತು. ರೋಟರಿ ಕ್ಲಬ್‌ಗಳ ಜೊತೆಗೆ ಸುದಾನ ವಸತಿಯುತ ಶಾಲೆ ಹಾಗೂ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಸಹಕರಿಸಿದರು. ಗಾಂಧೀಕಟ್ಟೆಯಲ್ಲಿ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗಾಂಧೀ ಭಜನೆ ನಡೆಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾತನಾಡಿ, ಸತ್ಯ, ಧರ್ಮ ಮತ್ತು ಅಹಿಂಸೆ ಸಾರಿದ ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಮಾತ್ರವಲ್ಲದೆ ಮತ್ತು ಸಮಾನತಗೆಗಾಗಿ ಹೋರಾಡಿದವರು. ದೇಶದ ಎರಡನೇ ಪ್ರಧಾನಿಯಾಗಿರವ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈ ಜವಾನ್, ಜೈ ಕಿಸಾನ್ ಎಂದು ಬೋಧಿಸಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಅಹಿಂಸೆ, ಶಾಂತಿ ಸಂದೇಶ ಸಾರಿದ ನಾಯಕರ ಹೆಸರು ಸೂರ್ಯಚಂದ್ರ ಇರುವಷ್ಟು ಕಾಲ ಶಾಶ್ವತವಾಗಿ ಉಳಿಯಲಿದೆ ಎಂದರು.