ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಅಡಿಕೆ ಕ್ಯಾನ್ಸರ್‌ ಕಣ ಪ್ರತಿಬಂಧಕ! ನಿಟ್ಟೆ ವಿ.ವಿ. ತಜ್ಞರಿಂದ 3 ಹಂತಗಳ ಸಂಶೋಧನೆ ಪೂರ್ಣ

Published

on

ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ, ಬದಲಾಗಿ ಅಡಿಕೆಯಿಂದ ಕ್ಯಾನ್ಸರ್‌ ಕಣಗಳು ತಟಸ್ಥಗೊಳ್ಳುತ್ತವೆ ಎನ್ನುವ ಮಹತ್ವದ ಅಂಶವನ್ನು ಈ ಕುರಿತು ಅಧ್ಯಯನ ನಡೆಸಿದ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರು ಕಂಡುಕೊಂಡಿದ್ದಾರೆ.

 

ವಿಶ್ವ ಆರೋಗ್ಯ ಸಂಸ್ಥೆ ಕೆಲವು ದಿನಗಳ ಹಿಂದೆ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ವರ್ಗೀ ಕರಿಸಿದ್ದು ಅಡಿಕೆ ಬೆಳೆಗಾರರಲ್ಲಿ ಕಳವಳ ಮೂಡಿಸಿತ್ತು.
ಸಂಪೂರ್ಣ ಅಧ್ಯಯನ ನಡೆ ಸದೆ, ಅಡಿಕೆ ಒಂದು ಭಾಗ ಮಾತ್ರವೇ ಆಗಿರುವ ತಂಬಾಕು ಸಹಿತ ಪಾನ್‌, ಪಾನ್‌ ಮಸಾಲಾ, ಗುಟ್ಕಾ ಇತ್ಯಾದಿ ಸೇವಿಸುವುದರಿಂದ ಕ್ಯಾನ್ಸರ್‌ ಉಂಟಾಗುವ ವಿಷಯವನ್ನಷ್ಟೇ ಎತ್ತಿಕೊಂಡು ಈ ರೀತಿಯ ವರ್ಗೀಕರಣ ಮಾಡಿದ್ದಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಇದರ ನಡುವೆಯೇ ಈಗ ನಿಟ್ಟೆ ವಿ.ವಿ. ತಜ್ಞರ ಸಂಶೋಧನೆ ಈಗ ಮಹತ್ವ ಪಡೆದಿದೆ.

ಮೂರು ವರ್ಷಗಳ ಹಿಂದೆ ಈ ಕುರಿತು ಅಧ್ಯಯನ, ಸಂಶೋಧನೆ ನಡೆಸುವುದಕ್ಕೆ ಕ್ಯಾಂಪ್ಕೊ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯಗಳು ತಿಳಿವಳಿಕೆ ಒಪ್ಪಂದ (ಎಂಒಯು) ಮಾಡಿಕೊಂಡಿದ್ದವು. ಒಟ್ಟು ನಾಲ್ಕು ವಿಭಾಗಗಳಲ್ಲಿ ಸಂಶೋಧನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು.

ಅಡಿಕೆಯ ಸಾರದಿಂದ ಝೀಬ್ರಾ ಮೀನಿನ ಮೇಲೆ ಪರಿಣಾಮ, ಅಡಿಕೆಯಿಂದ ಹಣ್ಣಿನ ನೊಣದ ಮೇಲೆ ಪರಿಣಾಮ, ಅಡಿಕೆಯ ರಸದಿಂದ ಕ್ಯಾನ್ಸರ್‌ ಕಣಗಳ ಮೇಲೆ ಪರಿಣಾಮ ಹಾಗೂ ಅಡಿಕೆ ಜಗಿಯುವ ಮಂದಿಯ ವೈಜ್ಞಾನಿಕ ಸಮೀಕ್ಷೆ-ಅಧ್ಯಯನ ನಡೆಸುವುದು ಇದರ ಮುಖ್ಯ ಅಂಶವಾಗಿತ್ತು.

ಈ ಪೈಕಿ ಮೂರು ವಿಭಾಗಗಳ ಸಂಶೋಧನೆ ಪೂರ್ಣ ಗೊಂಡಿದ್ದು, ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಿಸಲು ತೀರ್ಮಾನಿಸಲಾಗಿದೆ.

ಅಡಿಕೆ ಕ್ಯಾನ್ಸರ್‌ಕಾರಕವಲ್ಲ
ನಿಟ್ಟೆ ವಿ.ವಿ.ಯ ವಿಜ್ಞಾನಿ ಪ್ರೊ| ಇಡ್ಯಾ ಕರುಣಾಸಾಗರ್‌ ಮತ್ತವರ ತಂಡವು ನಡೆಸಿದ ಮೂರೂ ವಿಭಾಗಗಳ ಸಂಶೋಧನೆಯಲ್ಲಿ ಅಡಿಕೆಯಿಂದ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಉಂಟಾಗುವುದಿಲ್ಲ ಎನ್ನುವುದು ಕಂಡುಬಂದಿದೆ.

ಅಧ್ಯಯನದಲ್ಲಿ ಅಡಿಕೆಯ ಜಲೀಯ ಸಾರವನ್ನು ಹಣ್ಣಿನ ನೊಣ (ಡ್ರೊಸೊಫಿಲಾ) ಮತ್ತು ಝೀಬ್ರಾ ಮೀನುಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ (ಮೊಟ್ಟೆಯಿಂದ ಪ್ರೌಢಾವಸ್ಥೆಗೆ ಬರುವವ ವರೆಗೆ) ನೀಡಲಾಗಿದೆ. ಅಡಿಕೆಯಿಂದ ಅವುಗಳ ಮೇಲೆ ಯಾವುದೇ ನೇರ ಪರಿಣಾಮ ಕಂಡುಬಂದಿಲ್ಲ. ಝೀಬ್ರಾ ಮೀನು ಹಾಗೂ ಡ್ರೊಸೊಫಿಲಾಗಳ ಕ್ರೊಮೋಸೋಮ್‌ಗಳು ಮಾನವನ ಕ್ರೋಮೊಸೋಮ್‌ಗಳನ್ನು ಹೋಲುವುದರಿಂದ ಮಾನವನನ್ನು ಉದ್ದೇಶಿಸಿ ನಡೆಸುವ ಯಾವುದೇ ವೈಜ್ಞಾನಿಕ ಸಂಶೋಧನೆಗೆ ಆರಂಭಿಕ ಹಂತದಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

 

ಇನ್ನು, ಅಡಿಕೆಯ ಸಾರವು ಕ್ಯಾನ್ಸರ್‌ ಕಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪ್ರತ್ಯೇಕ ಅಧ್ಯಯನ ಮಾಡಲಾಗಿದೆ. ಪ್ರಯೋಗಾಲಯದ ಪೆಟ್ರಿಪ್ಲೇಟ್‌ಗಳಲ್ಲಿ ಕ್ಯಾನ್ಸರ್‌ ಕಣಗಳನ್ನು ಬೆಳೆಸಿ, ಅವುಗಳ ಮೇಲೆ ಅಡಿಕೆಯ ಸಾರವನ್ನು ಪ್ರಯೋಗಿಸಿದಾಗ ಅದು ಕ್ಯಾನ್ಸರ್‌ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎನ್ನುವುದನ್ನು ತಜ್ಞರು ಕಂಡುಕೊಂಡಿದ್ದಾರೆ. ಆದರೆ ಸಾಮಾನ್ಯ ಕಣಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಒಟ್ಟಾರೆಯಾಗಿ ಅಡಕೆಯ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎನ್ನುವ ಭಾರತದ ಸಂಪ್ರದಾಯಿಕ ಜ್ಞಾನಕ್ಕೆ ಈ ವರದಿ ಪೂರಕವಾಗಿ ಕಂಡುಬಂದಿದೆ ಎನ್ನುತ್ತಾರೆ ತಜ್ಞರು.

ಅಡಿಕೆ ಜಗಿಯುವವರ ಅಧ್ಯಯನ
ಇದೇ ಅಧ್ಯಯನ-ಸಂಶೋಧನೆಯ ಇನ್ನೊಂದು ಹಂತದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಸಮುದಾಯ ದಂತ ಆರೋಗ್ಯ ವಿಭಾಗದವರು “ಅಡಿಕೆಯನ್ನು ಮಾತ್ರ’ ಜಗಿಯುವವರ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಅದಿನ್ನೂ ಅಂತಿಮಗೊಂಡಿಲ್ಲ. ಹೆಚ್ಚು ಮಂದಿ ಅಡಿಕೆ ಜಗಿಯುವವರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗುತ್ತಿದೆ. ಇದುವರೆಗೆ ಅಡಿಕೆ ಜಗಿಯುವವರನ್ನು ಮಾತ್ರವೇ ದೊಡ್ಡಮಟ್ಟದಲ್ಲಿ ಅಧ್ಯಯನಕ್ಕೆ ಒಳಪಡಿಸದ ಕಾರಣ ತುಸು ದೀರ್ಘ‌ ಸಮಯ ಬೇಕಾದರೂ ವಿಸ್ತೃತ ಅಧ್ಯಯನ ನಡೆಸಬೇಕಾಗಿದೆ ಎನ್ನುವುದು ತಜ್ಞರ ಅಭಿಮತ.

ಈಗಿನ ಫಲಿತಾಂಶದಿಂದ ಮತ್ತಷ್ಟು ಬಲ ಈ ಹಿಂದೆಯೇ ವೀಳ್ಯದೆಲೆ-ಅಡಿಕೆಯ ಜಗಿಯುವುದು, ಅಡಿಕೆಯ ಗುಣಗಳ ಬಗ್ಗೆ ಕೆಲವು ಸಂಶೋಧನೆಗಳು ನಡೆದಿದ್ದು, ಅವುಗಳಲ್ಲಿ ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಎಂದೇ ಶ್ರುತಪಟ್ಟಿದೆ. ಈಗ ನಿಟ್ಟೆ ವಿ.ವಿ. ತಜ್ಞರ ವರದಿ ಅದಕ್ಕೆ ಮತ್ತಷ್ಟು ಬಲ ನೀಡಿದೆ ಎನ್ನುತ್ತಾರೆ ಅಡಿಕೆ ಸಂಶೋಧನ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಕೇಶವ ಭಟ್‌.

ಅಡಿಕೆಯ ಪರಿಣಾಮಗಳ ಬಗ್ಗೆ ನಿಟ್ಟೆ ವಿ.ವಿ. ತಜ್ಞರ ಅಧ್ಯಯನ ಬಹುತೇಕ ಪೂರ್ಣಗೊಂಡಿದ್ದು, ಅಡಿಕೆ ಬೆಳೆಗಾರರ ಪರವಾಗಿಯೇ ಬಂದಿದೆ. ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಎನ್ನುವುದು ಈಗ ಮತ್ತೆ ಸಾಬೀತುಗೊಂಡಿದೆ. ಕೇಂದ್ರದ ನೇತೃತ್ವದಲ್ಲಿ ಇನ್ನು ಸಮಗ್ರ ಅಧ್ಯಯನದ ನಿರೀಕ್ಷೆಯಲ್ಲಿದ್ದೇವೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version