Published
11 months agoon
By
Akkare News
ಬೆಂಗಳೂರು, ಏಪ್ರಿಲ್ 24: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ಬೆಂಗಳೂರು ತಲುಪಿದೆ. ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ ಬೆಂಗಳೂರು ತಲುಪಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯಿಂದ ಇಬ್ಬರು ಕನ್ನಡಿಗರ ಮೃತದೇಹಗಳು ಬೆಂಗಳೂರು ಏರ್ಪೋರ್ಟ್ ತಲುಪಿದ್ವು. ಮಂಜುನಾಥ್ ಸಂಬಂಧಿಕರು ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಇತ್ತ ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹ ಈಗಾಗಲೇ ಬೆಂಗಳೂರಿನಲ್ಲಿರುವ ಮತ್ತಿಕೆರೆ ನಿವಾಸ ತಲುಪಿದೆ. ಮನೆ ಬಳಿ ಬ್ಯಾರಿಕೇಡ್ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಚಿವರು, ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡವರ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.