Published
9 months agoon
By
Akkare News
ಮಂಗಳೂರು: ಜಿಲ್ಲೆಯಲ್ಲಿ ಮಳೆ ಹಾನಿ ಆದಾಗ ತತ್‌ಕ್ಷಣವೇ ಸಂಬಂಧಪಟ್ಟ ಸಂತ್ರಸ್ತರಿಗೆ ಪರಿಹಾರ ಹಣ ವಿತರಿಸಬೇಕು. ಇದರಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ ಎ.1 ರಿಂದ ಇಲ್ಲಿಯವರೆಗೆ ಒಟ್ಟು 82 ಮನೆಗಳು ಪೂರ್ಣವಾಗಿ ಹಾನಿಯಾಗಿದ್ದು, 705 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪರಿಹಾರ ವಿತರಿಸಲಾಗುತ್ತಿದೆ ಎಂದು ವಿವಿಧ ತಾಲೂಕಿನ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಸಚಿವರು, ಪುತ್ತೂರು ತಾಲೂಕಿನಲ್ಲಿ ಮನೆ ಹಾನಿ ಪರಿಹಾರ ವಿಳಂಬವಾಗಿದೆ ಎಂಬ ದೂರಿನ ಬಗ್ಗೆ ಉಲ್ಲೇಖಿಸಿದರು. ವಿಡಿಯೊ ಮೂಲಕ ಉತ್ತರಿಸಿದ ಪುತ್ತೂರು ತಹಶೀಲ್ದಾರ್ ಅವರು ಕೆವೈಸಿ ಸಹಿತ ಇತರ ಕಾರಣದಿಂದ ತಡವಾಗಿದೆ ಎಂದರು. ಇದಕ್ಕೆ ಸಚಿವರು, ಪರಿಹಾರ ವಿತರಣೆಯಲ್ಲಿ ವಿಳಂಬ ಆದರೆ ಕ್ರಮ ಅನಿವಾರ್ಯ ಎಂದರು.
ಭೂಕುಸಿತ ತಡೆಗೆ 27 ಕೋ.ರೂ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ದಕ್ಷಿಣ ಜಿಲ್ಲೆಯಲ್ಲಿ ಭೂಕುಸಿತ ಪ್ರಕರಣ ಹೆಚ್ಚಿದ್ದು, 100 ಕೋ.ರೂ.ಗಳ ಪ್ರತ್ಯೇಕ ಪ್ರಸ್ತಾವ ಕಳುಹಿಸಲಾಗಿತ್ತು. ಈ ಪೈಕಿ ತಡೆಗೋಡೆ ನಿರ್ಮಾಣ ಸಹಿತ ವಿವಿಧ ತುರ್ತು 36 ಕೆಲಸಗಳಿಗೆ 27 ಕೋ.ರೂ. ಬಿಡುಗಡೆಯಾಗಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ, ಕಳೆದ ವರ್ಷ ಮಳೆ ಹಾನಿಯಿಂದ ಗ್ರಾಮೀಣ ರಸ್ತೆ, ಸೇತುವೆ ಹಾನಿ ಆದದ್ದು ಇನ್ನೂ ದುರಸ್ತಿಯಾಗಿಲ್ಲ ಎಂದರು. ಜಿ.ಪಂ ಸಿಇಒ ಡಾ| ಆನಂದ್, ಪ್ರಸ್ತಾವನೆ ಸಲ್ಲಿಕೆ ಆಗಿದೆ. ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಸಂಪೂರ್ಣವಾಗಿ ಹಾನಿಗೀಡಾದ ಮನೆಗಳಿಗೆ ಎನ್‌ಡಿಆರ್‌ಎಫ್ ನಿಧಿಯಿಂದ 1.20 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ಹೊಸ ಮನೆ ಕಟ್ಟಲು ರಾಜೀವ್ ಗಾಂಧಿ ವಸತಿ ಯೋಜನೆ ಸೇರಿದಂತೆ ಒಟ್ಟಾರೆ 2.70 ಲಕ್ಷ ರೂ. ಅನುದಾನ ದೊರೆಯುತ್ತದೆ. ಮನೆ ಕಳೆದುಕೊಂಡ ಸಂತ್ರಸ್ತರನ್ನು ರಾಜೀವ್ ಗಾಂಧಿ ವಸತಿ ಯೋಜನೆಯಡಿ ನೋಂದಣಿ ಮಾಡಿಸಲು ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ 2.43 ಹೆಕ್ಟೇರ್ ಕೃಷಿ ಭೂಮಿ, 4.88 ಹೆ. ತೋಟಗಾರಿಕೆ ಬೆಳೆ ಹಾನಿ ಸಂಭವಿಸಿದೆ. ತೋಟಗಾರಿಕೆ ಬೆಳೆ ಹಾನಿಯಲ್ಲಿ 1.36 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ವಿವರಿಸಿದರೆ, ಜಿಲ್ಲೆಯಲ್ಲಿಜೂ.1ರಿಂದ 17ರವರೆಗೆ 4324 ವಿದ್ಯುತ್ ಕಂಬಗಳಿಗೆ ಹಾನಿ ಯಾಗಿದೆ ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.
ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ವಾಹನ ಸಂಚರಿಸುವ ಕುರಿತು ತಜ್ಞರ ವರದಿಯನ್ನು ಶೀಘ್ರವೇ ಪಡೆದು ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು. ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ| ಅರುಣ್ ಕೆ., ಡಿಎಫ್‌ಒ ಆ್ಯಂಟನಿ ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ನೆರೆ ನೀರಲ್ಲಿ ಬೈಕ್ ಚಲಾವಣೆ ಬೆಳ್ತಂಗಡಿಯಲ್ಲಿ ನೆರೆ ನೀರು ಇರುವಾಗ ಇಬ್ಬರು ಬೈಕರ್‌ಗಳು ಅಪಾಯಕಾರಿಯಾಗಿ ತೆರಳುತ್ತಿರುವ ವಿಡಿಯೋ ಬಗ್ಗೆ ಜಿಲ್ಲಾಧಿಕಾರಿ, ಇಂತಹ ಅಪಾಯಕಾರಿ ಘಟನೆಯ ಬಗ್ಗೆ ಸಂಬಂಧಪಟ್ಟವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದರು.