Published
8 months agoon
By
Akkare News
ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸವಾರ ಮೃತಪಟ್ಟರೆ ಅವರ ಕುಟುಂಬಕ್ಕೆ ಮೋಟಾರು ವಾಹನ ಕಾಯ್ದೆಯಡಿ ವಿಮಾ ಕಂಪನಿಯು ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅತಿವೇಗದಲ್ಲಿ ಕಾರು ಚಾಲನೆ ಮಾಡಿ ಮೃತಪಟ್ಟ ವ್ಯಕ್ತಿಯ ಪತ್ನಿ, ಮಗ ಮತ್ತು ಪೋಷಕರು ಕೋರಿದ ರೂಪಾಯಿ 80 ಲಕ್ಷ ಪರಿಹಾರ ನೀಡಲು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠ ನಿರಾಕರಿಸಿತು.
ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಮಾ ಕಂಪನಿ ಪರಿಹಾರ ನೀಡಬೇಕು ಎಂದು ಕೋರಿ ಮೃತರ ಕಾನೂನುಬದ್ಧ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಹೈಕೋರ್ಟ್ 2024ರ ನವೆಂಬರ್‌ನಲ್ಲಿ ನಿರಾಕರಿಸಿತ್ತು.
‘ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ನಾವು ಹಸ್ತಕ್ಷೇಪ ಮಾಡಲು ಒಲವು ಹೊಂದಿಲ್ಲ. ಅರ್ಜಿ ವಜಾಗೊಳಿಸಲಾಗಿದೆ’ ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.
2014ರ ಜೂನ್‌ನಲ್ಲಿ ಮಲ್ಲಸಂದ್ರ ಗ್ರಾಮದಿಂದ ಅರಸೀಕೆರೆ ಪಟ್ಟಣಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ಎನ್.ಎಸ್. ರವೀಶ ಎಂಬವರು ಮೃತಪಟ್ಟಿದ್ದರು. ರವೀಶ ತಂದೆ, ಸಹೋದರಿ ಹಾಗೂ ಅವರ ಮಕ್ಕಳು ಕಾರಿನಲ್ಲಿ ಇದ್ದರು. ‘ರವೀಶ ಕಾರನ್ನು ನಿರ್ಲಕ್ಷ್ಯದಿಂದ ಚಲಾಯಿಸಿದ್ದಾರೆ. ಅವರು ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆಗೆ ಉರುಳಿಬಿದ್ದಿತ್ತು. ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಮೃತರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ. ಹೀಗಾಗಿ, ಅವರ ಕುಟುಂಬದವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತ್ತು.