Connect with us

ಇತರ

ಪ್ರೀತಿಸಿ ಮದುವೆಯಾದ ಜೋಡಿಗೆ…. ನೇಗಿಲು ಕಟ್ಟಿ ಹೊಲ ಉಳುಮೆ ಮಾಡಿಸಿದ ಗ್ರಾಮಸ್ಥರು… ಗ್ರಾಮದ ಶುದ್ದಿಕರಣಕ್ಕೆ ವಿಶೇಷ ಶಿಕ್ಷೆ…

Published

on

ಬುಡಕಟ್ಟು ನಿಯಮ ಮೀರಿ ಪ್ರೀತಿಸಿ ಮದುವೆಯಾದ ಜೋಡಿಯೊಂದಕ್ಕೆ ನೇಗಿಲು ಕಟ್ಟಿ ಹೊಲ ಉಳುಮೆ ಮಾಡಿದ ಅಮಾನವೀಯ ಘಟನೆ ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಈಗ ಅಂತದ್ದೇ ಮತ್ತೊಂದು ಘಟನೆ ಕೊರಾಪುಟ್ ಜಿಲ್ಲೆಯಲ್ಲಿ ವರದಿಯಾಗಿದೆ.


ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ರಕ್ತ ಸಂಬಂಧಿಗಳಾದ ಜೋಡಿಗೆ ಎತ್ತುಗಳಂತೆ ನೇಗಿಲು ಕಟ್ಟಿ ಹೊಲ ಉಳುಮೆ ಮಾಡಲಾಗಿದೆ. ಕಳೆದ ಭಾನುವಾರ ನಾರಾಯಣಪಟ್ಟಣ ಬ್ಲಾಕ್‌ನಲ್ಲಿರುವ ಪೆಡೈಟಿಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪೆಡೈಟಿಕಿಯ ನರೇಂದ್ರ ಪಿಡಿಕಾ (22) ಮತ್ತು ನಾರಾಯಣಪಟ್ಟಣ ಬ್ಲಾಕ್ ವ್ಯಾಪ್ತಿಯ ನದಿಮಿಟಿಕಿ ಗ್ರಾಮದ ಅಸಾಂತಿ ಪಿಡಿಕಾ (21) ಒಂದೇ ಕುಲದವರು.ಕೊಂಡ ಸಮುದಾಯದ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಊರಿನಲ್ಲಿ ಹಬ್ಬದ ಸಮಯದಲ್ಲಿ ಅವರು ಆಂಧ್ರಪ್ರದೇಶಕ್ಕೆ ಓಡಿಹೋಗಿದ್ದರು. ವಾಪಸ್ ತಮ್ಮ ತಮ್ಮ ಹಳ್ಳಿಗಳಿಗೆ ಮರಳಿದಾಗ, ಸಮುದಾಯದ ಜನರು ಅವರ ಮದುವೆಯನ್ನು ನಿಷಿದ್ಧ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ.

ಗ್ರಾಮದಲ್ಲಿ ಸಮುದಾಯದ ಹಿರಿಯರೆಲ್ಲ ಸೇರಿ ಜೋಡಿಯ ಮದುವೆಯ ಕುರಿತು ಚರ್ಚಿಸಿದ್ದರು. ಅಲ್ಲಿ ಮದುವೆಯನ್ನು ಒಪ್ಪಿಕೊಳ್ಳಬೇಕಾದರೆ ಸಮುದಾಯದ ನಿಯಮದಂತೆ ನೊಗ ಕಟ್ಟಿ ಗದ್ದೆ ಉಳುಮೆಗೈದು ಶುದ್ದೀಕರಣ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ನಂತರ ಜೋಡಿಗೆ ನೇಗಿಲು ಕಟ್ಟಿ ಪೆಡೈಟಿಕಿಯ ಬೀದಿಗಳಲ್ಲಿ ಎತ್ತುಗಳಂತೆ ಮೆರವಣಿಗೆ ಮಾಡಲಾಗಿದೆ. ಕೊನೆಗೆ ಗ್ರಾಮ ದೇವತೆಯ ಮುಂದೆ ಪ್ರಾರ್ಥನೆ ಸಲ್ಲಿಸಿ,ಗಂಡ ನರೇಂದ್ರನ ಮನೆಯಲ್ಲಿ ಇರಲು ಅಸಾಂತಿಗೆ ಅವಕಾಶ ನೀಡಲಾಗಿದೆ ಎಂದು ವರದಿಗಳು ಹೇಳಿವೆ.

“ನಮ್ಮ ನಂಬಿಕೆಯ ಪ್ರಕಾರ, ಒಂದೇ ಕುಲದೊಳಗೆ ಮದುವೆ ನಡೆದರೆ, ಅದು ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಬೆಳೆ ವೈಫಲ್ಯ ಮತ್ತು ರೋಗ ಹರಡುವಿಕೆಗೆ ಕಾರಣವಾಗುತ್ತದೆ. ಈ ಆಚರಣೆಯು ಗ್ರಾಮವನ್ನು ಆ ಪಾಪದಿಂದ ಶುದ್ಧೀಕರಿಸುವ ಉದ್ದೇಶವನ್ನು ಹೊಂದಿದೆ” ಎಂದು ನರೇಂದ್ರ ಅವರ ಸೋದರಸಂಬಂಧಿ ಸಂತೋಷ್ ಪಿಡಿಕಾ ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸ್ಥಳೀಯ ವಾರ್ಡ್ ಸದಸ್ಯೆ ಗುಂಫಾ ಹುಯಿಕಾ ಕೂಡ ಇದೇ ಭಾವನೆಯನ್ನು ವ್ಯಕ್ತಪಡಿಸಿದ್ದು,ದಂಪತಿ ಹಿರಿಯರಿಂದ ಕ್ಷಮೆ ಯಾಚಿಸುವ ‘ಸಾಂಪ್ರದಾಯಿಕ ಶುದ್ಧೀಕರಣ ಪ್ರಕ್ರಿಯೆ’ನಡೆಸಲಾಗಿದೆ ಎಂದಿದ್ದಾರೆ.


“ಇಂತಹ ಆಚರಣೆಯ ನಂತರವೇ ಅವರನ್ನು ಒಟ್ಟಿಗೆ ವಾಸಿಸಲು ಅನುಮತಿಸಬಹುದು” ಎಂದು ಹುಯಿಕಾ ಹೇಳಿದ್ದು, “ಅಸಾಂತಿಯ ಕುಟುಂಬವು ಬುಡಕಟ್ಟು ಪದ್ಧತಿಗಳನ್ನು ಗೌರವಿಸುವ ಷರತ್ತಿನ ಮೇಲೆ ಮಾತ್ರ ಮದುವೆಗೆ ಒಪ್ಪಿಕೊಂಡಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಘಟನೆಯನ್ನು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಖಂಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಿ ಇಂತಹ ಕೃತ್ಯಕ್ಕೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದು ವರದಿಗಳು ಹೇಳಿವೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version