Published
7 months agoon
By
Akkare News
ಪುತ್ತೂರು : ಶಿಕ್ಷಕ ರಮೇಶ್ ಉಳಯ ಮತ್ತು ಶಿಕ್ಷಕ ಪ್ರಶಾಂತ್ ಅನಂತಾಡಿಯವರ ತಲಾ ಮೂರು ಮೂರು ಕಥೆಗಳು ಕರ್ನಾಟಕ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳಿಗೆ ವಾಚಕ ಪಠ್ಯವಾಗಿ ಆಯ್ಕೆಯಾಗಿವೆ.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಈ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಒಂದರಿಂದ ಮೂರನೇ ತರಗತಿಯ ವರೆಗಿನ ಮಕ್ಕಳ ಕಲಿಕೆಗಾಗಿ ಸುಮಾರು 46 ವಾಚಕಗಳನ್ನು ವಾಚಕ ಪಠ್ಯವಾಗಿ ನೀಡಿದೆ. ಇವೆಲ್ಲವೂ ವಿಶಿಷ್ಟ ರೀತಿಯ ಕಥೆಗಳು, ವಿವಿಧ ರೀತಿಯ ವಿವರಣೆಗಳು, ಕೆಲವೊಂದು ಪ್ರಕಾರಗಳ ಮಾಹಿತಿಗಳನ್ನು ಒಳಗೊಂಡಿವೆ. ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಇದರ ಉಸ್ತುವಾರಿಯಲ್ಲಿ ಇಲ್ಲಿನ ಕಾರ್ಯಕ್ರಮ ಅಧಿಕಾರಿ ಡಾ. ಗುಣವತಿ ಇವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ವಾಚಕಗಳು ಚಿತ್ರಸಹಿತ ಬರೆಯಗಳಾಗಿವೆ.
ರಾಜ್ಯದ ಪ್ರಾಥಮಿಕ ಶಾಲಾ ನಲಿ ಕಲಿ ಮಕ್ಕಳು ಓದಲು ಅನುಕೂಲವಾಗುವ ರೀತಿಯಲ್ಲಿರುವ ಈ ವಾಚಗಳ ರಚನೆಗಾಗಿ 2023 ರಿಂದ ವಿವಿಧ ಹಂತದ ಕಾರ್ಯಾಗಾರಗಳು ಬೆಂಗಳೂರು, ಧಾರವಾಡ ಇಲ್ಲಿ ನಡೆದಿತ್ತು. ಈ ಕಾರ್ಯಕ್ಕೆ ರಾಜ್ಯದ ಸುಮಾರು 30 ಶಿಕ್ಷಕರಲ್ಲಿ ಪುತ್ತೂರು ತಾಲೂಕಿನ ಶಿಕ್ಷಕರಾದ ರಮೇಶ್ ಉಳಯ ಮತ್ತು ಪ್ರಶಾಂತ್ ಅನಂತಾಡಿ ಇವರು ಆಯ್ಕೆಯಾಗಿದ್ದರು.
ರಮೇಶ್ ಉಳಯ :
ಪ್ರಸ್ತುತ ಪುತ್ತೂರು ತಾಲೂಕಿನ ಸಂಜಯ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಬರಹಗಾರರಾಗಿದ್ದು ಸುಮಾರು ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ .
ಸಮೂಹ ಸಂಪನ್ನ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಾಗಿಯೂ ಕೆಲಸ ನಿರ್ವಹಿಸಿರುವ ಇವರು ಸುಮಾರು 20ಕ್ಕೂ ಹೆಚ್ಚು ವಿಷಯಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ಜಿಲ್ಲೆಯ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ರಾಜ್ಯ ಪ್ರಾಥಮಿಕ ಶಾಲಾ ಪಠ್ಯಪುಸ್ತಕ ಸಮಿತಿ, ರಾಜ್ಯ ನಲಿ ಕಲಿ ಕೋಶ ಸೇರಿದಂತೆ ಸುಮಾರು 20ಕ್ಕಿಂತಲೂ ಹೆಚ್ಚು ರಾಜ್ಯಮಟ್ಟದ ಸಮಿತಿಗಳಲ್ಲಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮೈಸೂರು ವಿಭಾಗ ಮಟ್ಟದ ಅತ್ಯುತ್ತಮ ಕ್ಷೇತ್ರ ಸಂಪನ್ಮೂಲ ವ್ಯಕ್ತಿ , ಪ್ರಶಸ್ತಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರಾಜ್ಯ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ .
ಇವರ ನಲ್ಲಿಯಲ್ಲಿ ಹಾಲು, ಅಬ್ರಕ ಡಬ್ರಕ ,ಗಡಬಡ ತಿರುಗುವ ಫ್ಯಾನು ಎಂಬ ಮೂರು ಬರಹಗಳು ಈ ವಾಚಕ ಮಾಲಿಕೆಗೆ ಆಯ್ಕೆಯಾಗಿವೆ.
ಪ್ರಶಾಂತ್ ಅನಂತಾಡಿ :
ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇದರ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿರುವ ಇವರು ಉದಯೋನ್ಮುಖ ಬರಹಗಾರರಾಗಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಮದಪೆರಾವಂದಿ ತುಳುವೆರ್ ಪುಸ್ತಕ ಮಾಲಿಕೆಯಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪಠ್ಯಪುಸ್ತಕ ಸಮಿತಿಯ ತುಳು ಪಠ್ಯಪುಸ್ತಕ ವಿಭಾಗದಲ್ಲಿ ಮತ್ತು ಆಂಗ್ಲ ಭಾಷಾ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅನೇಕ ಕೈಪಿಡಿ ರಚನೆಗಳಲ್ಲಿಯೂ ಭಾಗವಹಿಸಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಮಕ್ಕಳಿಂದ ಪುಸ್ತಕಗಳನ್ನು ಪ್ರಕಟ ಮಾಡುವಂತೆ ಮಾಡಿದ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ವತಿಯಿಂದ ನಡೆದ ರಾಜ್ಯಮಟ್ಟದ ನಾಟಕ ರಚನಾ ಕಾರ್ಯಗಾರಕ್ಕೆ ಆಯ್ಕೆಯಾಗಿ ಮಾರಿಕಳೆ ಎಂಬ ನಾಟಕವನ್ನು ರಚಿಸಿ ಪ್ರದರ್ಶನ ಮಾಡಿದ್ದಾರೆ.
ಬ್ರಿಟಿಷ್ ಕೌನ್ಸಿಲಿನ ಆಂಗ್ಲ ಭಾಷಾ ತರಬೇತಿಯ ತರಬೇತಿದಾರನಾಗಿಯೂ ಸೇವೆ ಸಲ್ಲಿಸಿರುವ ಇವರು ಕರ್ನಾಟಕ ಸರ್ಕಾರದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಯುವವಾಹಿನಿ ಯುವಸಾಧಕ ಪ್ರಶಸ್ತಿ, ರೋಟರಿ ಕ್ಲಬ್ ನೇಷನ್ ಬಿಲ್ಡರ್ ಅವಾರ್ಡ್ ಪುರಸ್ಕಾರಗಳನ್ನು ಪಡೆದಿದ್ದಾರೆ.
ಇವರ ಪುಟ್ಟನ ಹೊಸಮನೆ, ಜಾನು ಇರುವೆ-ಮುನ್ನಿ ಕಪ್ಪೆ, ಚಿನ್ನು ಹುಳುವಿನ ಮನೆ ಎಂಬ ಮೂರು ಕಥೆಗಳು ಈ ವಾಚಕ ಮಾಲೆಯಲ್ಲಿ ಪ್ರಕಟಗೊಂಡಿವೆ.