Published
10 months agoon
By
Akkare News
ಪಟ್ನಾ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ಬಿಹಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ‘ಜನ ಸುರಾಜ್‘ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ. ಹಾಗೆಯೇ, ರಾಜ್ಯ ಬಿಜೆಪಿ ನಾಯಕರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಅವರಿಗಿಂತಲೂ ‘ಭ್ರಷ್ಟರು’ ಎಂದು ದೂರಿದ್ದಾರೆ.
ಬಿಹಾರ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಹಾಗೂ ಸದ್ಯ ಆರೋಗ್ಯ ಸಚಿವರಾಗಿರುವ ಮಂಗಲ್ ಪಾಂಡೆ ವಿರುದ್ಧ ಪ್ರಶಾಂತ್ ಕಿಶೋರ್ ನೇರ ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ಆರೋಗ್ಯ ಇಲಾಖೆಯು, ತಲಾ ₹ 28 ಲಕ್ಷದಂತೆ 1,200 ಆಂಬುಲೆನ್ಸ್‌ಗಳನ್ನು ಖರೀದಿಸಲು ಮುಂದಾಗಿದೆ. ಈ ಮೊತ್ತವು, ಒಡಿಶಾ ಮತ್ತು ಉತ್ತರ ಪ್ರದೇಶ ಪಾವತಿಸುತ್ತಿರುವುದಕ್ಕಿಂತ ದುಪ್ಪಟ್ಟಾಗಿದೆ ಎಂದು ಒತ್ತಿ ಹೇಳಿದ್ದಾರೆ. ಹಾಗೆಯೇ, ಪಾಂಡೆ ಅವರು ಕೋವಿಡ್–19 ಸಾಂಕ್ರಾಮಿಕದ ವೇಳೆ ದೆಹಲಿಯಲ್ಲಿ ತಮ್ಮ ಪತ್ನಿಯ ಹೆಸರಲ್ಲಿ ಫ್ಲಾಟ್ ಖರೀದಿಸಿದ್ದಾರೆ. ಇದಕ್ಕೆ, ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಜೈಸ್ವಾಲ್ ನೆರವಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.