Published
5 months agoon
By
Akkare News
ಮಂಗಳೂರು ಅಕ್ಟೋಬರ್ 08: ಉಳ್ಳಾಲ ಶಾರದೋತ್ಸವದ ವೇಳೆ ಪೊಲೀಸ್ ಮತ್ತು ಸ್ಥಳೀಯರ ನಡುವೆ ನಡೆದ ಮಾತಿನಚಕಮಕಿ ಮತ್ತು ಗೊಂದಲಗಳ ಬಗ್ಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಉಳ್ಳಾಲ ಶಾರದೋತ್ಸವ ಮೆರವಣಿಗೆ ಅರ್ಧಕ್ಕೆ ನಿಂತಿದ್ದ ಬಗ್ಗೆ ತನಗೂ ವಿಷಾದವಿದೆ. ಅದನ್ನು ಪೊಲೀಸರು ನಿಲ್ಲಿಸಿಲ್ಲ ಎಂದು ಹೇಳಿದ್ದಾರೆ. ಉಳ್ಳಾಲ ಶಾರದೋತ್ಸವ ಗಲಾಟೆಗೆ ಇಬ್ಬರು ಪಿಎಸ್ಐಗಳೇ ಕಾರಣ, ಕಾಂಗ್ರೆಸ್ ಸರ್ಕಾರ ಪೊಲೀಸರನ್ನ ಛೂಬಿಟ್ಟು ಹಿಂದೂಗಳನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಸ್ಥಳೀಯ ಬಿಜೆಪಿ ನಾಯಕರು ಮಾಡಿರುವ ಆರೋಪಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಎಲ್ಲಾ ಮೆರವಣಿಗೆಗಳ ಮೊದಲು, ಸಂಘಟಕರು ಬಂದು ಸಮಯವನ್ನು ವಿಸ್ತರಿಸುವಂತೆ ವಿನಂತಿಸಿದ್ದಾರೆ, ಉಳ್ಳಾಲ ಶಾರದೋತ್ಸವದ ಸಂಘಟಕರು ಕೂಡ ಸಭೆಯಲ್ಲಿ ಮುಂಜಾನೆ 1 ಗಂಟೆಯೊಳಗೆ ಮೆರವಣಿಗೆಯನ್ನು ಪೂರ್ಣಗೊಳಿಸಲು ಒಪ್ಪಿದರು. ಆದರೆ ಅದು ಬೆಳಿಗ್ಗೆ 1 ಗಂಟೆಯಾದರೂ ಪೂರ್ಣಗೊಳ್ಳದ ಕಾರಣ ಪೊಲೀಸರು ಮೈಕ್ ನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಅಲ್ಲದೆ ಹೆಚ್ಚಿನ ಸಮಯಬೇಕಾಗಿದ್ದರೆ, ಸಂಬಂಧಪಟ್ಟವರು ಪೊಲೀಸರಿಂದ ಪರ್ಮಿಶನ್ ತೆಗೆದುಕೊಳ್ಳಬಹುದಾಗಿತ್ತು ಎಂದರು.
ಉಳ್ಳಾಲ ಪಿಎಸ್ಐ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿದ್ದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮೂವರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದರು. ಆದರೆ ಉತ್ಸವ ನಡೆಸುತ್ತಿದ್ದವರು ಶಾರದಾ ಮೂರ್ತಿಯನ್ನು ರಸ್ತೆಯಲ್ಲೇ ಬಿಟ್ಟು ಪ್ರತಿಭಟನೆಗೆ ಇಳಿದಿದ್ದರು. ದೇವರ ಮೂರ್ತಿಯ ಮುಂದೆ ಅವಾಚ್ಯ ಶಬ್ದಗಳನ್ನು ಬಳಸಿದ್ದು ಅವರಿಗೆ ತಪ್ಪು ಎನಿಸಲಿಲ್ಲ. ಬದಲಿಗೆ ಅವರ ಪರವಾಗಿಯೇ ಠಾಣೆಗೆ ಬಂದು ಸಮರ್ಥನೆಗೆ ನಿಂತಿದ್ದರು.
ಪೊಲೀಸರ ವಿರುದ್ದ ಅವಾಚ್ಯಶಬ್ದಗಳಿಂದ ನಿಂದಿನಿಸದ ವ್ಯಕ್ತಿಯನ್ನು ರಕ್ಷಣೆ ಮಾಡಲು ಜನರು ಶಾರದಾ ಮೂರ್ತಿಯನ್ನು ರಸ್ತೆಯಲ್ಲಿ ಬಿಟ್ಟಿದ್ದರು. ಅವಾಚ್ಯ ಶಬ್ದಗಳನ್ನು ದೇವರ ಮುಂದೆ ಹೇಳುವುದು ಯಾರಿಗೂ ದೇವರಿಗೆ ಮಾಡಿದ ಅವಮಾನವೆಂದು ತೋರಿಲ್ಲ, ಅಲ್ಲದೆ ಆ ಮಾತುಗಳನ್ನು ಹೇಳಿದ ವ್ಯಕ್ತಿಯನ್ನು ಬಿಡುಗಡೆ ಮಾಡುವುದು ಜನರಿಗೆ ದೇವರಿಗಿಂತ ಹೆಚ್ಚು ಮುಖ್ಯವಾಯಿತು ಮತ್ತು ಅವರು ಶಾರದೆಯನ್ನು ಅರ್ಧದಲ್ಲೆ ಬಿಟ್ಟು ಪೊಲೀಸ್ ಸ್ಟೇಷನ್ ಮುಂದೆ ಜಮಾಯಿಸಿದ್ದರು.
ಡಿಸಿಪಿ ಮಿಥುನ್ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ, ಇಬ್ಬರು ಆರೋಪಿಗಳ ಪಾತ್ರ ಕಡಿಮೆ ಎಂದನಿಸಿದ್ದಕ್ಕೆ ಅವರನ್ನು ಬಿಟ್ಟು ಕಳಿಸಿದ್ದರು. ಬಳಿಕ ಶಾರದೋತ್ಸವ ಕೂಡ ಶಾಂತಿಯುತವಾಗಿಯೇ ನಡೆದಿತ್ತು. ಘಟನೆ ಬಗ್ಗೆ ಚರ್ಚಿಸಲು ಶಾರದೋತ್ಸವ ಸಮಿತಿಯವರು ತನ್ನಲ್ಲಿಗೆ ಬಂದಿದ್ದರು. ಈ ವೇಳೆ, ಪಿಎಸ್ಐ ಒಬ್ಬರು ತಾಸೆಯ ಕೋಲನ್ನು ಎಸೆದಿದ್ದು ತಪ್ಪೆಂದು ತಾನೂ ಒಪ್ಪಿಕೊಂಡಿದ್ದು ಅದಕ್ಕಾಗಿ ಪಿಎಸ್ಐ ಪರವಾಗಿ ಕ್ಷಮೆಯನ್ನೂ ಕೇಳಿದ್ದೆ.
ಪಿಎಸ್ಐ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಅವರೂ ಕ್ಷಮೆ ಯಾಚನೆ ಮಾಡಿದ್ದರು. ಪೊಲೀಸರ ಬಗ್ಗೆ ನಿಂದಿಸಿ ಪ್ರಚೋದನಕಾರಿ ವರ್ತಿಸದೇ ಇರುತ್ತಿದ್ದರೆ ಇಂತಹ ಘಟನೆಗಳು ಆಗುತ್ತಿರಲಿಲ್ಲ ಎಂದೂ ಅವರಿಗೆ ತಿಳಿಸಿದ್ದೆ.
ಶಾರದಾ ಮೆರವಣಿಗೆಯನ್ನು ನಿಲ್ಲಿಸಿದಾಗ ನನಗೂ ನೋವಾಯಿತು. ಆದರೆ ನಾವು ಅದನ್ನು ನಿಲ್ಲಿಸಲಿಲ್ಲ. ಪೊಲೀಸರನ್ನು ನಿಂದಿಸಿದವರನ್ನು ಮಾತ್ರ ನಾವು ಪೊಲೀಸ್ ಸ್ಟೇಶನ್ ಗೆ ಕರೆದೊಯ್ದಿದ್ದೇವೆ. ಆದರೆ ಪೊಲೀಸರು ಮೆರವಣಿಗೆಯನ್ನು ಎಂದಿಗೂ ನಿಲ್ಲಿಸಲಿಲ್ಲ ಅಥವಾ ನಿಲ್ಲಿಸಲು ಬಯಸಲಿಲ್ಲ. ಅವರು ಈಗಾಗಲೇ 307 ಪ್ರಕರಣದಲ್ಲಿ ಆರೋಪಿಯಾಗಿದ್ದ ದುಷ್ಕರ್ಮಿಗಳನ್ನು ಮಾತ್ರ ವಶಕ್ಕೆ ತೆಗೆದುಕೊಂಡರು, ಒಟ್ಟು ಪ್ರಕರಣವನ್ನು ಶಾರದೋತ್ಸವ ಕಮಿಟಿ ಮತ್ತು ಮೊಗವೀರ ಸಮುದಾಯದವರು ಕುಳಿತು ಇತ್ಯರ್ಥ ಮಾಡಿದ್ದಾರೆ.