Published
4 months agoon
By
Akkare News
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಕೊರತೆ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತವು ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಮಾತ್ರ ಕೆಂಪು ಕಲ್ಲು ಸಾಗಾಟಕ್ಕೆ ಅನುಮತಿ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡದ ಕೆಂಪುಕಲ್ಲನ್ನು ಉಡುಪಿ ಅಥವಾ ಉತ್ತರ ಕನ್ನಡಕ್ಕೆ ಸಾಗಿಸಲು ಸದ್ಯಕ್ಕೆ ಗಣಿ ಇಲಾಖೆ ನಿರ್ಬಂಧ ವಿಧಿಸಿದೆ.
ನಾಲ್ಕು ತಿಂಗಳುಗಳಿನಿಂದ ಕೆಂಪು ಕಲ್ಲು ಪೂರೈಕೆ ಸ್ಥಗಿತದಿಂದ ದ.ಕ. ಜಿಲ್ಲೆಯಾದ್ಯಂತ ನಿರ್ಮಾಣ ಕ್ಷೇತ್ರ ಹಾಗೂ ಕಾರ್ಮಿಕ ವರ್ಗಕ್ಕೆ ಸಮಸ್ಯೆ ಎದುರಾಗಿತ್ತು. ಸದ್ಯ ಕಾನೂನಿನಲ್ಲಿ ಕೊಂಚ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಕೆಂಪು ಕಲ್ಲು ಸಾಗಾಟ ಹಲವು ದಿನಗಳಿಂದ ಮರಳಿ ಆರಂಭವಾಗಿದೆ. ಸದ್ಯ 50 ಮಂದಿ ಕೆಂಪುಕಲ್ಲು ಸಾಗಾಟಕ್ಕೆ ಅನುಮತಿ ಪಡೆದಿದ್ದಾರೆ. ಬೇಡಿಕೆಯೂ ಅಧಿಕವಿದೆ. ಇಂತಹ ಸಂದರ್ಭದಲ್ಲಿ ಕೆಂಪು ಕಲ್ಲು ಇತರ ಜಿಲ್ಲೆಗೆ ಸಾಗಾಟ ಮಾಡಿದರೆ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರತೆ ಉಲ್ಬಣಿಸಬಹುದು ಎಂಬ ಲೆಕ್ಕಾಚಾರದಿಂದ ಈಗ ಜಿಲ್ಲೆಯೊಳಗೆ ಮಾತ್ರ ಸಾಗಾಟ ಎಂಬ ನಿಯಮ ಜಾರಿಯಲ್ಲಿದೆ.
ಇದು ತಾತ್ಕಾಲಿಕ ಮಾತ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಕೆಂಪು ಕಲ್ಲು ಬೇಡಿಕೆಗೆ ಬೇಕಾದಷ್ಟು ಸಿಗದ ಕಾರಣ ಹಾಗೂ ಪರವಾನಿಗೆ ಪಡೆದವರ ಸಂಖ್ಯೆಯೂ ಕಡಿಮೆ ಇರುವ ಕಾರಣ ಹೊರಜಿಲ್ಲೆಗೆ ನಿರ್ಬಂಧ ನಿಯಮವನ್ನು ದ.ಕ. ಜಿಲ್ಲಾ ಟಾಸ್ಕ್ ಪೋರ್ಸ್ ಜಾರಿಗೊಳಿಸಿದೆ. ಮುಂದೆ ಬೇಡಿಕೆ ಕಡಿಮೆ ಆಗಿ, ಅಧಿಕ ಮಂದಿ ಪರವಾನಿಗೆ ಪಡೆದರೆ ಉಡುಪಿ, ಕಾಸರಗೋಡು ಜಿಲ್ಲೆಗಳಿಗೂ ಕೆಂಪು ಕಲ್ಲು ಸಾಗಾಟ ನಡೆಸಲು ಅವಕಾಶ ಸಿಗುವ ಸಾಧ್ಯತೆ ಇದೆ.
ನವೀಕರಣ ಇಲ್ಲ
ಕೆಂಪು ಕಲ್ಲು ತೆಗೆಯಲು ಒಂದು ವರ್ಷಕ್ಕೆ ಅನುಮತಿ ನೀಡಿ ಬಳಿಕದ ವರ್ಷಂಪ್ರತಿ ನವೀಕರಿಸಬೇಕು ಎಂದು ಇತ್ತೀಚೆಗೆ ಹೇಳಲಾಗಿತ್ತು. ಆದರೆ ಸರಕಾರದಿಂದ ಬಂದ ಇತ್ತೀಚೆಗಿನ ಮಾರ್ಗಸೂಚಿಯಲ್ಲಿ ‘ನವೀಕರಣ’ದ ಉಲ್ಲೇಖವಿಲ್ಲ. ಬದಲಾಗಿ ಒಂದು ವರ್ಷ ಆದ ಬಳಿಕ ಮತ್ತೆ ಹೊಸದಾಗಿ ಅನುಮತಿ ಪಡೆಯಬೇಕು.
2 ಡಿ ದರ ಇಳಿಕೆ, ದರ ಕುತೂಹಲ!
ಏರಿಕೆ ಮಾಡಿದ್ದ 2ಡಿ ರಾಯಧನ ದರವನ್ನು(256 ರೂ.) ಇತ್ತೀಚೆಗೆ ಸರಕಾರ ಕೈ ಬಿಟ್ಟ ಕಾರಣ ಕೆಂಪುಕಲ್ಲು 1 ಟನ್ ದರ ಈಗ 95 ರೂ.ಗಳಷ್ಟು ಇಳಿಕೆಯಾಗಿದೆ. ಕೆಂಪು ಕಲ್ಲು ಬೇಡಿಕೆಯಷ್ಟು ಪೂರೈಕೆ ಇಲ್ಲದ ಕಾರಣ ಹಾಗೂ 2ಡಿ ಏರಿಕೆಯಿಂದ ಮಂಗಳೂರು ವ್ಯಾಪ್ತಿಯಲ್ಲಿ 70 ರೂ. ಇದ್ದ ಒಂದು ಕಲ್ಲಿನ ದರ ಈಗ 50 ರೂ. ಸುಮಾರಿಗೆ ಬಂದಿದೆ. ಪರವಾನಿಗೆ ಸಂಖ್ಯೆ ಅಧಿಕವಾಗುತ್ತಿರುವ ಕಾರಣ ಮುಂದೆ ಒಂದೆರಡು ತಿಂಗಳುಗಳಲ್ಲಿ ಈ ದರ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಕಾರ್ಯಪಡೆಗೆ ತಜ್ಞರ ತಂಡ
ಗಣಿ ವಿಷಯ ಕಾರ್ಯಚಟುವಟಿಕೆ ಮೇಲೆ ನಿಗಾ ಇರಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗುತ್ತಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಪೊಲೀಸ್ ಅಧೀಕ್ಷಕರು ಹಾಗೂ ಗಣಿ ಇಲಾಖೆ ಉಪನಿರ್ದೇಶಕರು ಇದರಲ್ಲಿ ಇರುತ್ತಾರೆ. ಈಗ ಇದಕ್ಕೆ ಸೇರ್ಪಡೆಯಾಗಿ ತಜ್ಞರ ಸಮಿತಿಯನ್ನೂ ನೇಮಿಸಲಾಗಿದೆ. ಎನ್ ಐಟಿಕೆ ಮತ್ತು ಇತರ ಕ್ಷೇತ್ರಗಳ ತಜ್ಞರು ಕಾರ್ಯಪಡೆಗೆ ವರದಿ ನೀಡಬೇಕಾಗಿದೆ. ಗಣಿ ಅನುಮತಿ ನೀಡುವುದು ಹಾಗೂ ಕೆಂಪುಕಲ್ಲು ತೆಗೆದ ಬಳಿಕ ಅಲ್ಲಿನ ಪಾಯದ ಸ್ಥಿತಿಗತಿಯನ್ನು ಈ ಮೂಲಕ ಪರಿಶೀಲಿಸಲಾಗುತ್ತದೆ.
ಕೆಂಪು ಕಲ್ಲುಸಾಗಾಟ ಕರಾವಳಿಗೆ ಮಾತ್ರ?
‘ಪರವಾನಿಗೆದಾರರು ಖನಿಜ ಸಾಗಾಣಿಕೆ ಪರವಾನಿಗೆ ಪಡೆದು ಕರಾವಳಿ ಜಿಲ್ಲೆಗಳಿಗೆ ಮಾತ್ರ ಲ್ಯಾಟರೈಟ್ ಬ್ರಿಕ್ಸ್ ಸಾಗಾಟ ಮಾಡಬೇಕು’ ಎಂದು ಸರಕಾರ ಇತ್ತೀಚೆಗೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದೆ. ಈ ಪ್ರಕಾರ ಲಭ್ಯತೆ ಪರಿಸ್ಥಿತಿ ಸುಧಾರಿಸಿದ ಬಳಿಕವೂ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾತ್ರ ಕೆಂಪು ಕಲ್ಲು ಸಾಗಾಟ ಮಾಡಬೇಕಾಗಿದೆ. ಹೀಗಾಗಿ ಬೆಂಗಳೂರು ಸಹಿತ ಹೊರ ಜಿಲ್ಲೆಗಳಲ್ಲಿರುವ ಮೂಲತಃ ಕರಾವಳಿ ಭಾಗದವರು ಅಲ್ಲಿ ಮನೆ ನಿರ್ಮಾಣಕ್ಕೆ ಇಲ್ಲಿನ ಕೆಂಪುಕಲ್ಲು ಕೊಂಡೊಯ್ಯಲು ಅವಕಾಶ ಇಲ್ಲ. ಪಕ್ಕದ ಕೇರಳಕ್ಕೂ ಸಾಗಾಟ ಮಾಡಲು ಅವಕಾಶ ಇರುವುದಿಲ್ಲ.
ಕಾರ್ಯಪಡೆಯಲ್ಲಿ ತೀರ್ಮಾನ
ಕೆಂಪು ಕಲ್ಲು ಕರಾವಳಿ ಭಾಗಕ್ಕೆ ಮಾತ್ರ ಎಂದು ಸರಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕಲ್ಲಿನ ಬೇಡಿಕೆ ಈಗ ಅಧಿಕ ಇದೆ. ಕೇವಲ 50 ಪರವಾನಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.