Published
3 months agoon
By
Akkare News
ಪುತ್ತೂರು:ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ತಾಲೂಕು ಕಚೇರಿಯ ಭೂಮಿ ಶಾಖೆಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಲ್ಲಿ, ತಮ್ಮ ಮೇಲೂ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು ತಹಶೀಲ್ದಾರ್ ಡಿ.1ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತಹಶೀಲ್ದಾರ್ ಎಸ್.ಬಿ ಕೂಡಲಿಗಿ ಅವರು, ತನ್ನ ಮೇಲಿನ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ತಹಶೀಲ್ದಾರ್ ಎಸ್.ಬಿ ಕೂಡಲಿಗಿ ಅವರಿಗೆ ಜಾಮೀನು ಮಂಜೂರುಗೊಳಿಸಿದ್ದು ಮತ್ತೆ ತನ್ನ ಮೂಲಸ್ಥಾನಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ಕಳೆದ ಮೂರು ತಿಂಗಳುಗಳಿಂದ ಪೂರ್ಣಕಾಲಿಕ ತಹಶೀಲ್ದಾರ್ ಇಲ್ಲದೇ ಇದ್ದ ತಾಲೂಕು ಕಚೇರಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ-ತಹಶೀಲ್ದಾರ್ ಕೂಡಲಿಗಿ:
ಅನಾವಶ್ಯಕವಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ. ದೂರು ನೀಡಿದ ವ್ಯಕ್ತಿಯ ಪರಿಚಯವೇ ನನಗಿಲ್ಲ. ಯಾವ ಊರು ಎಂಬುದೇ ನನಗೆ ತಿಳಿದಿಲ್ಲ. ಆ ಫೈಲ್ ನನಗೆ ಬಂದಿಲ್ಲ. ಕಚೇರಿ ಸಿಬ್ಬಂದಿ ನನ್ನ ಹೆಸರು ಹೇಳಿ ಹಣ ಮಾಡುವುದು. ದೂರು ನೀಡಿದ ವ್ಯಕ್ತಿ ಪದೇ ಪದೇ ಅವನ ಬಳಿ ಹೋಗಿದ್ದಾರೆ. ಆ ವ್ಯಕ್ತಿ ನನ್ನ ಬಳಿ ಬರುತ್ತಿದ್ದರೆ ಆಗಲೇ ಇತ್ಯರ್ಥ ಆಗುತ್ತಿತ್ತು. ನನ್ನ ಮೂವತ್ತು ವರ್ಷದ ಸೇವೆಯಲ್ಲಿ ಯಾರನ್ನೂ ಈ ರೀತಿ ಮಾಡಿಲ್ಲ. ಈಗ ತನಿಖೆ ನಡೆಯಿತ್ತಿದೆ. ಒಂದು ಪ್ರಕರಣದಲ್ಲಿ ಜಾಮೀನು ಆಗಿದೆ. ಇನ್ನೊಂದು ಪ್ರಕರಣವನ್ನು ಸ್ಕ್ವಾಷ್‌ಗೆ ಹಾಕಿದ್ದೇನೆ. ನನ್ನ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ವಿನಾಕಾರಣ ನನಗೆ ಚಿತ್ರ ಹಿಂಸೆ ನೀಡಿದ್ದಾರೆ. ನನ್ನ ಮೇಲಿನ ಆರೋಪದ ಬಗ್ಗೆ ನ್ಯಾಯಾಂಗದ ಮೊರೆ ಹೋಗಿದ್ದೇನೆ. ವಿಚಾರಣೆ ನಡೆಯುತ್ತಿದೆ. ಶೀಘ್ರದಲ್ಲಿ ಸತ್ಯಾಂಶ ಬರಲಿದೆ. ಎಲ್ಲಾ ವಿಚಾರಣೆ ಎದುರಿಸುತ್ತೇನೆ. ನನ್ನ ಮೇಲಿನ ಆರೋಪ ಸುಳ್ಳು ಎಂದು ಸಾಬೀತು ಪಡಿಸಲು ನನ್ನಲ್ಲಿ ಎಲ್ಲಾ ದಾಖಲೆಗಳು ಇದೆ ಎಂದು ತಹಸಿಲ್ದಾರ್ ಕೂಡಲಗಿ ಹೇಳಿದ್ದಾರೆ.
ಹೆಸರು ದುರ್ಬಳಕೆ ಮಾಡದಂತೆ ಎಚ್ಚರಿಕೆ:
ಕಚೇರಿಯಲ್ಲಿ ತಹಶೀಲ್ದಾರ್ ಹೆಸರು ಹೇಳಿ ಕೆಲವು ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಆದೇಶ ಮಾಡಿದ್ದು, ತಹಶೀಲ್ದಾರ್ ಹೆಸರು ದುರ್ಬಳಕೆ ಮಾಡಿಕೊಂಡು ಹಣಕ್ಕೆ ಬೇಡಿಕೆಯಿಟ್ಟು ಸಾರ್ವಜನಿಕರ ಕೆಲಸಗಳಿಗೆ ತೊಂದರೆ ನೀಡಿದರೆ, ಹಣ ಪಡೆದುಕೊಂಡು ಭ್ರಷ್ಟಾಚಾರ ನಡೆಸಿದರೆ ಅದಕ್ಕೆ ನೀವೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದ್ದೇನೆ ಎಂದು ತಹಶೀಲ್ದಾರ್ ಎಸ್.ಬಿ ಕೂಡಲಗಿ ತಿಳಿಸಿದ್ದಾರೆ.