Connect with us

ಇತರ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ-ಪೂರ್ವಭಾವಿ ಸಮಾಲೋಚನಾ ಸಭೆ

Published

on

ಕನ್ನಡ ಸಾಹಿತ್ಯ ಪರಿಷತ್ತಿನ ದಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಂಟ್ವಾಳ ತಾಲೂಕು ಕಸಾಪ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಆಯೋಜಿಸುವ ಕುರಿತು ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಸಮ್ಮೇಳನವನ್ನು ಸರಳವಾಗಿ, ಸರ್ವರ ಸಹಭಾಗಿತ್ವದೊಂದಿಗೆ ಹೊಸತನದಿಂದ ಆಯೋಜಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಸ್ಥಳೀಯ ಸಂಘ–ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಾರ್ಚ್ ತಿಂಗಳಲ್ಲಿ ಸಮ್ಮೇಳನವನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲ ವರ್ಗಗಳ ಸಹಕಾರ ಅಗತ್ಯವಿದ್ದು, ಬಂಟ್ವಾಳ ತಾಲೂಕು ಕಸಾಪ ಗೆ ದೊರಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸಲಹೆ ನೀಡಿದರು.

ಸಭೆಯಲ್ಲಿ ಪುತ್ತೂರು ತಾಲೂಕು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ, ಸಮ್ಮೇಳನ ನಡೆಸಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅನುದಾನ ಇಲ್ಲದೇ ಇರುವ ಕಾರಣ, ಸಮ್ಮೇಳನದಲ್ಲಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗಿಯಾಗುವ ಸಾಹಿತಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವ ಸಂಭಾವನೆ ನೀಡುವುದು ಸಾಹಿತ್ಯ ಪರಿಷತ್ತಿಗೆ ಹೊರೆಯಾಗಿ ಪರಿಣಮಿಸ ಬಹುದು ಆದ್ದರಿಂದ ಸಂಭಾವನೆ ಪಡೆಯದೆ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವವರಿಗೆ ಆದ್ಯತೆ ನೀಡುವುದು ಸೂಕ್ತ ಎಂದೂ, ಸಮ್ಮೇಳನವು ಪರಿಣಾಮಕಾರಿಯಾಗಿ- ಸರಳವಾಗಿ ಅರ್ಥಪೂರ್ಣವಾಗಿ ನಡೆಯಬೇಕೇ ಹೊರತು ಆಡಂಬರ- ದುಂದು ವೆಚ್ಚ ಮಾಡುವ ಅಗತ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಭೆಯಲ್ಲಿ ಈ ವಿಷಯವನ್ನು ಸಮಗ್ರವಾಗಿ ಚರ್ಚಿಸಿ, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸಾಹಿತ್ಯ ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ಸಮ್ಮೇಳನವನ್ನು ಬಂಟ್ವಾಳದಲ್ಲಿ ನಡೆಸುವ ಕುರಿತು ನಿರ್ಣಯವನ್ನು ತಿಳಿಸಲಾಗುವುದು ಎಂದು ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಹೇಳಿದರು.

ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಕಸಾಪ ಸದಸ್ಯ ಪೂವಪ್ಪ ನೇರಳಕಟ್ಟೆ, ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಸದಸ್ಯ ಸುಭಾಷ್ಚಂದ್ರ ಜೈನ್, ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಕಾರ್ಯದರ್ಶಿಗಳಾದ ವಿ.ಸು. ಭಟ್, ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಡಿ.ಬಿ. ಅಬ್ದುಲ್ ರಹಿಮಾನ್, ವಿಟ್ಲ ಹೋಬಳಿ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಪಿ. ಮಹಮ್ಮದ್ ಹಾಗೂ ಪದಾಧಿಕಾರಿಗಳಾದ ಹರೀಶ ಮಾಂಬಾಡಿ, ರವೀಂದ್ರ ಕುಕ್ಜಾಜೆ, ಅಬೂಬಕ್ಕರ್ ಅಮ್ಮುಂಜೆ, ರಜನಿ ಚಿಕ್ಕಯ್ಯ ಮಠ, ಸನ್ಮತಿ ಜೈನ್, ಲತೀಫ್ ನೇರಳಕಟ್ಟೆ, ಸಲೀಂ ಬೋಳಂಗಡಿ ಮೊದಲಾದವರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ ಉಪಸ್ಥಿತರಿದ್ದು, ಸಮ್ಮೇಳನ ಯಶಸ್ವಿಯಾಗಿ ನಡೆಯಲು ಅಮೂಲ್ಯ ಸಲಹೆ–ಸೂಚನೆಗಳನ್ನು ನೀಡಿ ಧನ್ಯವಾದ ಸಮರ್ಪಣೆ ಮಾಡಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version