Connect with us

ಇತರ

ಪುತ್ತೂರು: ಕಾರಂತರ ಶಾಲೆ ಆವರಣದ ಅನಾಥ ಸ್ಥಿತಿ!

Published

on

ಪುತ್ತೂರು :ನೂರ ಅರುವತ್ತು ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಮೊತ್ತ ಮೊದಲ ಸರಕಾರಿ ಶಾಲೆಯ ಕಟ್ಟಡ, ಕಡಲತೀರದ ಭಾರ್ಗವ ಡಾ|ಶಿವರಾಮ ಕಾರಂತರ ಸಾಂಸ್ಕೃತಿಕ ಚಟುವಟಿಕೆ ಕೇಂದ್ರವನ್ನು ರಾತ್ರೋರಾತ್ರಿ ಕೆಡಹಿ ನಾಲ್ಕು ವರ್ಷ ಕಳೆದಿದೆ. ಈಗ ಅಲ್ಲಿನ ಪರಿಸ್ಥಿತಿ ಹೇಗಿದೆಯೆಂದು ದಿಟ್ಟಿಸಿದರೆ, ಕೆಡಹಿ ಹಾಕಿದ ಅನಂತರ ರಾಶಿ ಬಿದ್ದ ಮಣ್ಣು, ಕಟ್ಟಡ ಸಾಮಗ್ರಿಯನ್ನು ತೆರವು ಮಾಡಿಲ್ಲ!

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗದಲ್ಲಿನ ನೆಲ್ಲಿಕಟ್ಟೆಯಲ್ಲಿ 1865ರಲ್ಲಿ ನಿರ್ಮಾಣಗೊಂಡ ಸರಕಾರಿ ಶಾಲೆಯ ಕಟ್ಟಡ ಇದಾಗಿದ್ದು, ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಿತ್ತು. ಡಾ| ಕೆ. ಶಿವರಾಮ ಕಾರಂತರು ಈ ಶಾಲೆಯಲ್ಲಿ ರಂಗ ತರಬೇತಿ ಕಾರ್ಯಾಗಾರ ನಡೆಸುತ್ತಿದ್ದರು, ನಾಡಹಬ್ಬ ದಸರಾ ಆರಂಭಿಸಿದ್ದರು. ಈ ಕಟ್ಟಡವನ್ನು ಹೆರಿಟೇಜ್‌ ಬಿಲ್ಡಿಂಗ್‌ ಎಂದು ಘೋಷಿಸಿ ಪುನರುತ್ಥಾನ ಕೈಗೊಂಡು ಸಂರಕ್ಷಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಅಂಗೀಕಾರಗೊಳ್ಳುವ ಮೊದಲೇ ನೆಲಸಮ ಆಗಿತ್ತು.

ಆಕರ್ಷಕ ಕಟ್ಟಡ
ಪುತ್ತೂರು ಮತ್ತು ಅಕ್ಕಪಕ್ಕದ 2-3 ತಾಲೂಕು ಗಳಲ್ಲಿ ಶಾಲೆಯೇ ಇಲ್ಲದ ಸಂದರ್ಭ 1865ರಲ್ಲಿ ಬ್ರಿಟಿಷ್‌ ಸರಕಾರ ಮೊತ್ತಮೊದಲು ಪುತ್ತೂರಿನ ಕೇಂದ್ರ ಭಾಗದಲ್ಲಿ ಸರಕಾರಿ ಶಾಲೆ ಆರಂಭಿಸಿತ್ತು. ಇದಕ್ಕಾಗಿ ಭವ್ಯ ಕಟ್ಟಡ ನಿರ್ಮಿಸಿತ್ತು. ವೇದಿಕೆ ಮಾದರಿಯ ಎತ್ತರದ ಪಂಚಾಂಗ, ಪಡಸಾಲೆಯುದ್ದಕ್ಕೂ ಬೃಹತ್‌ ಕಂಬಗಳು, ಮಾಡಿಗೆ ದಪ್ಪನೆಯ ಮರದ ಪಕ್ಕಾಸುಗಳಿದ್ದವು. ಒಟ್ಟು 3.25 ಎಕರೆ ಜಮೀನು ಶಾಲೆಗಿದೆ.

ಕಟ್ಟಡದಲ್ಲಿ ಪುಟ್ಟ ಸಭಾಂಗಣವಿದ್ದು, ಮಧ್ಯದಲ್ಲಿ ಗ್ರೀಕ್‌ ಮಾದರಿಯ ರಂಗಮಂಟಪ ವಿತ್ತು. ನೆಲಮಟ್ಟದಿಂದ ತಗ್ಗಿನಲ್ಲಿ ಚೌಕಾಕಾರದ ತಳವೇದಿಕೆಯಿದ್ದು, ಇಳಿಯಲು 2 ಭಾಗದಿಂದ ಮೆಟ್ಟಿಲುಗಳಿದ್ದವು. ಅದರಲ್ಲಿ ನಾಟಕ ಮತ್ತಿತರ ರಂಗ ಪ್ರದರ್ಶನ ನಡೆಯುತ್ತಿದ್ದು, ಸುತ್ತಲಿನ ಎತ್ತರದ ಗ್ಯಾಲರಿಯಲ್ಲಿ ಕುಳಿತು ನೋಡಬಹುದಾಗಿತ್ತು.

ಕಾರಂತರ ಕರ್ಮಭೂಮಿ
1930ರ ದಶಕದಲ್ಲಿ ಪುತ್ತೂರಿಗೆ ಬಂದ ಡಾ|ಕೆ. ಶಿವರಾಮ ಕಾರಂತರು ಈ ಶಾಲೆಯಲ್ಲಿ ಅನೇಕ ರಂಗ ಚಟುವಟಿಕೆ, ನಾಟಕ ತರಬೇತಿ ಇತ್ಯಾದಿ ನಡೆಸುತ್ತಿದ್ದರು. ಪುತ್ತೂರಿನ ಮೊದಲ ನಾಡಹಬ್ಬ ದಸರಾವನ್ನೂ ಇದೇ ಶಾಲೆಯ ವಠಾರದಲ್ಲಿ ಆರಂಭಿಸಿದ್ದರು. ಪುತ್ತೂರಿನ ಮೊದಲ ಗಣೇಶೋತ್ಸವವೂ ಇಲ್ಲೇ ಆರಂಭಗೊಂಡಿತ್ತು. ಕೆಲವು ದಶಕಗಳಿಂದ ಈ ಕಟ್ಟಡದಲ್ಲಿ ತರಗತಿಗಳು ನಡೆಯುವುದು ನಿಂತಿತ್ತು. ಪಕ್ಕದ ಕಟ್ಟಡಗಳಿಗೆ ಸ್ಥಳಾಂತರಗೊಂಡಿತ್ತು.
ದಶಕದ ಹಿಂದೆ ಪುತ್ತೂರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾದಾಗ ಕೆಲ ಸಮಯ ಇದೇ ಪ್ರಾಚೀನ ಕಟ್ಟಡದಲ್ಲಿ ಕಾಲೇಜು ತರಗತಿಗಳು ನಡೆದಿದ್ದವು. ಬಳಿಕ ಅದು ಜಿಡೆಕಲ್ಲಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತ್ತು. ಬಳಿಕ ಪುತ್ತೂರಿಗೆ ಮಹಿಳಾ ಸರಕಾರಿ ಕಾಲೇಜು ಮಂಜೂರಾದಾಗ 2013ರಿಂದ 2015ರ ವರೆಗೆ ಇದರ ಪಕ್ಕದಲ್ಲೇ ತರಗತಿ ನಡೆದಿತ್ತು. ಅದಾದ ಅನಂತರ ಈ ಕಟ್ಟಡ
ಚಟುವಟಿಕೆ ರಹಿತವಾಗಿತ್ತು.

ಬಿಇಓ ಕಚೇರಿ ಅದಲು-ಬದಲು
ಸಂಜೀವ ಮಠಂದೂರು ಅವರು ಶಾಸಕರಾಗಿದ್ದ ಅವಧಿಯಲ್ಲಿ ಈ ಸ್ಥಳದಲ್ಲಿ ಬಿಇಓ ಕಚೇರಿ ನಿರ್ಮಾಣದ ಉದ್ದೇಶ ಹೊಂದಲಾಗಿತ್ತು. ಒಂದು ಬದಿಯಲ್ಲಿ ಗುದ್ದಲಿ ಪೂಜೆಯು ನಡೆದಿತ್ತು. ಅದಾದ ಕೆಲ ದಿನಗಳಲ್ಲೇ ಹಳೆ ಕಟ್ಟಡವನ್ನು ನೆಲಸಮ ಮಾಡಲಾಯಿತು. ಆ ಬಳಿಕ ಶಾಸಕರಾಗಿ ಆಯ್ಕೆಯಾದ ಅಶೋಕ್‌ ಕುಮಾರ್‌ ರೈ ಅವರು ನೆಲ್ಲಿಕಟ್ಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಬಿಇಓ ಕಚೇರಿಯನ್ನು ಈ ಹಿಂದೆ ಇದ್ದ ಸ್ಥಳದಲ್ಲಿ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲಿ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯು ಆಗಿದೆ. ಆದರೆ, ನೆಲ್ಲಿಕಟ್ಟೆಯಲ್ಲಿ ಕೆಡಹಿದ ಕಟ್ಟಡದ ಕಥೆ ಮುಂದೇನು ಎನ್ನುವ ಬಗ್ಗೆ ಯಾರಲ್ಲೂ ಉತ್ತರ ಇಲ್ಲ. ಕೆಡಹಿದ್ದು ಏಕೆ ಎಂದರೂ ಸ್ಪಷ್ಟ ಉತ್ತರ ಇಲ್ಲ. ಜನಪ್ರತಿನಿಧಿಗಳು ಕಾರಂತರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ.

ಯಾವುದೇ ಪ್ರಸ್ತಾವನೆ ಇಲ್ಲ!
ಕೆಡಹಿದ ಕಟ್ಟಡ ಸ್ಥಳದಲ್ಲಿ ಬೇರೆ ಯಾವುದೇ ಯೋಜನೆಗಳ ಅನುಷ್ಠಾನದ ಪ್ರಸ್ತಾವ ಇಲ್ಲ.
-ವಿಷ್ಣುಪ್ರಸಾದ್‌, ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು

ಅಭಿವೃದ್ಧಿಯೂ ಇಲ್ಲ!
ಕಾರಂತರ ಸಾಂಸ್ಕೃತಿಕ ಚಟುವಟಿಕೆ ಗಳಿಗೆ ಸಾಕ್ಷಿಯಂತಿದ್ದ ಕಟ್ಟಡ ನಾಲ್ಕು ವರ್ಷಗಳ ಹಿಂದೆ ತೆರವು ಮಾಡಲಾಗಿತ್ತು. ಕಾರಂತರ ಸಾಹಿತ್ಯ ಚಟುವಟಿಕೆಗೆ ಪೂರಕ ವಾದ ರೀತಿಯಲ್ಲಿ ಅದನ್ನು ಅಭಿವೃದ್ಧಿ ಮಾಡಬಹುದು. ಈ ಬಗ್ಗೆ ಶಾಸಕರ ಗಮನಕ್ಕೆ ತರುತ್ತೇವೆ.

ಉಮೇಶ್‌ ನಾಯಕ್‌ ಪುತ್ತೂರು, ಅಧ್ಯಕ್ಷ, ಕಸಾಪ ಪುತ್ತೂರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version