Published
2 weeks agoon
By
Akkare News
ಉಡುಪಿ ಏಪ್ರಿಲ್ 11: ನೆಲ್ಯಾಡಿ ನಿವಾಸಿ ಬಿ. ಸುದೀಪ್ ರೈ (31) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಪತ್ನಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ (28) ಅವರನ್ನು ಕಾರ್ಕಳ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಸುದೀಪ್ ರೈ ಅವರು ಮಾರ್ಚ್ 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಾರ್ಚ್ 29ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತನಿಖೆಯ ವೇಳೆ, ಸುದೀಪ್ ರೈ ಅವರು ಫೆಬ್ರವರಿ 17ರಂದು ಪುತ್ತೂರು ಉಪ-ನೋಂದಣಿ ಕಚೇರಿಯಲ್ಲಿ ಮನೆಮಂದಿಗೆ ತಿಳಿಸದೆ ಸೌಮ್ಯ ಶೆಟ್ಟಿಯವರೊಂದಿಗೆ ವಿವಾಹ ನೊಂದಣಿ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿದೆ.
ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸುದೀಪ್ ಅವರ ತಂದೆ ದಾಮೋದರ ರೈ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮದುವೆಯ ಅನಂತರ ದಂಪತಿಗಳ ನಡುವೆ ನಡೆದ ಕಲಹ ಅಥವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಪ್ರಕರಣದ ತನಿಖೆ ಮುಂದುವರಿದ ಹಿನ್ನೆಲೆ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. “ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ ಸೌಮ್ಯ ಶೆಟ್ಟಿಯನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ಪ್ರಗತಿಯಲ್ಲಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ .
ಸುದೀಪ್ ಸಾವಿನ ಬಳಿಕ ಸೌಮ್ಯ ಶೆಟ್ಟಿ ವಿರುದ್ದ ಹಲವು ಆರೋಪಗಳು ಕೇಳಿ ಬಂದಿತ್ತು, ಸುದೀಪ್ ತಂದೆ ಮತ್ತು ತಾಯಿ ಸೌಮ್ಯ ಶೆಟ್ಟಿಯೇ ನನ್ನ ಮಗನ ಸಾವಿಗೆ ಕಾರಣ ಎಂದು ಆರೋಪಿಸಿದ್ದರು, ಅಲ್ಲದೆ ಸೌಮ್ಯ ಶೆಟ್ಟಿಯ ಮಾಜಿ ಪ್ರಿಯಕರ ವೇಣು ಆಕೆಯ ವಿರುದ್ದ ಹಲವಾರು ಆರೋಪಗಳನ್ನು ಮಾಡಿದ್ದರು. ಇದೀಗ ಪೊಲೀಸರು ಸೌಮ್ಯ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದಾರೆ.