Connect with us

ಇತರ

ರಾಷ್ಟ್ರೀಯ ಯುವ ಹವಾಮಾನ ಪರಿಣಾಮ ಸಮುದಾಯದ ಕರ್ನಾಟಕ ರಾಜ್ಯ ಮುಖ್ಯಸ್ಥರಾಗಿ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ನೇಮಕ

Published

on

ಪುತ್ತೂರು: ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಯುವಜನತೆಯನ್ನು ಸಂಘಟಿಸುವ ಉದ್ದೇಶ ಹೊಂದಿರುವ ಪ್ರತಿಷ್ಠಿತ ವಿಶ್ವ ಸಂಸ್ಥೆಯ ಯುನಿಸೆಫ್ ಯುವದ ರಾಷ್ಟ್ರೀಯ ಯುವ ಹವಾಮಾನ ಪರಿಣಾಮ ಸಮುದಾಯದ ಕರ್ನಾಟಕ ರಾಜ್ಯ ಮುಖ್ಯಸ್ಥರಾಗಿ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ಅವರನ್ನು ನೇಮಕ‌ ಮಾಡಲಾಗಿದೆ.

ಯುವ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆಯ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಲಕ್ಷಾಂತರ ಯುವಜನರಿಗೆ ತರಬೇತಿ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಶ್ರೀಕಾಂತ್ ಅವರಿಗೆ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಯುವಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ.

ರಾಜ್ಯಾದ್ಯಂತ ಯುವಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದು, ಹಸಿರು ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮತ್ತು ಹವಾಮಾನ ವೈಪರೀತ್ಯದ ಕುರಿತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ನೇಮಕಾತಿಯ ಮುಖ್ಯ ಉದ್ದೇಶವಾಗಿದೆ.

 

ಶ್ರೀಕಾಂತ್ ಪೂಜಾರಿ ಬಿರಾವು ಅವರು ಈಗಾಗಲೇ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಯುವ ರಾಯಭಾರಿಯಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾಗಿ ಕಾರ್ಯನಿರ್ವಹಿಸಿರುತ್ತಾರೆ. ಅವರ ಈ ಹಿಂದಿನ ಯುವಜನ ಸಂಬಂಧಿಸಿದ ಸಾಧನೆ ಮತ್ತು ಯುವಜನರನ್ನು ಸಂಘಟಿಸುವ ಚಾತುರ್ಯವನ್ನು ಗುರುತಿಸಿ ವಿಶ್ವ ಸಂಸ್ಥೆಯ ಯುನಿಸೆಫ್ ಯುವದ ರಾಷ್ಟ್ರೀಯ ಯುವ ಹವಾಮಾನ ಒಕ್ಕೂಟವು ಕರ್ನಾಟಕ ರಾಜ್ಯದ ಈ ಜವಾಬ್ದಾರಿಯನ್ನು ಇವರಿಗೆ ನೀಡಿದೆ.
ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಅಭಿಯಾನಗಳನ್ನು ನಡೆಸುವುದು, ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುವುದು ಮತ್ತು ಪರಿಸರ ಸಂರಕ್ಷಣೆಯಲ್ಲಿ ಯುವಜನರ ನೇರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಮುಖಾಂತರ ಯುವಜನರೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ.

ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಯುವಜನತೆಗೆ ತರಬೇತಿ,ಮಾರ್ಗದರ್ಶನ ನೀಡುತ್ತಿರುವ ಪುತ್ತೂರಿನ ಶ್ರೀಕಾಂತ್ ಪೂಜಾರಿ ಬಿರಾವು ಅವರಿಗೆ ಈ ಮಹತ್ವದ ಹುದ್ದೆ ಲಭಿಸಿರುವುದು ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version