Published
21 hours agoon
By
Akkare News
ಸಿಐಡಿ ತನಿಖೆಯ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯ ಅಸಲಿ ಬಣ್ಣ ಬಯಲಾಗಿದ್ದು, ಕೆಪಿಎಸ್ಸಿ ಪರೀಕ್ಷೆಗಳ ಉಸ್ತುವಾರಿ ಹಾಗೂ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರೇ ಈ ಇಡೀ ಹಗರಣದ ಪ್ರಮುಖ ಸೂತ್ರಧಾರ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಹೌದು, ಉನ್ನತ ಹುದ್ದೆಯಲ್ಲಿದ್ದುಕೊಂಡು, ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಬೇಕಿದ್ದ ಅಧಿಕಾರಿಯೇ ಹಣದ ಆಸೆಗೆ ಬಿದ್ದು ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ದೆಹಲಿಯಲ್ಲಿ ಸಿಕ್ಕಿಬಿದ್ದ ಮಧ್ಯವರ್ತಿ ಬಸವರಾಜ್ ಕನ್ನಾಳೆ ಗ್ಯಾನೇಂದ್ರ ಕುಮಾರ್ ಬಂಧನದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಐಡಿ ತಂಡ, ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಗಾಗಿ ಬಲೆ ಬೀಸಿತ್ತು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ನಿವಾಸಿಯಾಗಿರುವ ಬಸವರಾಜ್, ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದಲ್ಲದೆ, ಸ್ಥಳೀಯ ಮುಖಂಡನಾಗಿದ್ದ.
ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಈತನನ್ನು ವಶಕ್ಕೆ ಪಡೆಯುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದಲ್ಲದೆ, ಭಾಲ್ಕಿ ನಗರದ ಲೆಕ್ಚರರ್ ಕಾಲನಿಯಲ್ಲಿರುವ ಹಾಗೂ ಡೋಣಗಾಪುರ್ ಗ್ರಾಮದಲ್ಲಿರುವ ಈತನ ಮನೆಗಳ ಮೇಲೂ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
₹40 ಲಕ್ಷಕ್ಕೆ ಸೇಲ್ ಆಯ್ತು ಪರೀಕ್ಷಾ ಪ್ರಶ್ನೆಪತ್ರಿಕೆ!
ಅರ್ಹ ಅಭ್ಯರ್ಥಿಗಳಿಗೆ ದ್ರೋಹ ಬಗೆದು ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಆರೋಪಿಗಳು ಭಾರಿ ಸಂಚು ರೂಪಿಸಿದ್ದರು. ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರಿಂದ ರಹಸ್ಯವಾಗಿ ಪ್ರಶ್ನೆಪತ್ರಿಕೆಯನ್ನ ಪಡೆದುಕೊಂಡಿದ್ದ ಬಸವರಾಜ್ ಕನ್ನಾಳೆ, ಅದನ್ನು ಅಭ್ಯರ್ಥಿಗಳಿಗೆ ತಲಾ 40 ಲಕ್ಷ ರೂಪಾಯಿಗಳಂತೆ ಮಾರಾಟ ಮಾಡಿದ್ದ. ಹುದ್ದೆಯ ಆಸೆಗೆ ಬಿದ್ದ ಹಲವು ಅಭ್ಯರ್ಥಿಗಳು ಈತನಿಗೆ ಹಣ ನೀಡಿ ಪ್ರಶ್ನೆಪತ್ರಿಕೆ ಖರೀದಿಸಿದ್ದರು ಎನ್ನುವ ವಿಚಾರ ಸಿಐಡಿ ವಿಚಾರಣೆ ವೇಳೆ ಬಯಲಾಗಿದ

ಸೋಮವಾರವಷ್ಟೇ ಬಂಧಿತ ಇಬ್ಬರು ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಸೆಪ್ಟೆಂಬರ್ 9ರವರೆಗೆ ಇಬ್ಬರನ್ನೂ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ. ಈ ಭಾರಿ ಹಗರಣದಲ್ಲಿ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ, ಎಷ್ಟು ಅಭ್ಯರ್ಥಿಗಳು ಹಣ ನೀಡಿ ಪರೀಕ್ಷೆ ಬರೆದಿದ್ದಾರೆ ಎಂಬಿತ್ಯಾದಿ ಸತ್ಯಾಸತ್ಯತೆಗಳು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಹೊರಬರಬೇಕಿದೆ.