Published
4 hours agoon
By
Akkare News

ಪುತ್ತೂರಿನ ಶಿವರಾಮ ಕಾರಂತ ಬಾಲವನದಲ್ಲಿರುವ ಈಜುಕೊಳದಲ್ಲಿ ಈಜು ತರಬೇತಿ ಪಡೆದಿರುವ ಲಿಖಿತ್, ಇದುವರೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 182 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ, ನಾಲ್ಕು ಪ್ರಮುಖ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಗೆದ್ದಿರುವುದು ಅವರ ಕ್ರೀಡಾ ಪ್ರತಿಭೆಗೆ ಸಾಕ್ಷಿಯಾಗಿದೆ.
ಇವರ ಸಾಧನೆಗಳಲ್ಲಿ 13ನೇ ವಯಸ್ಸಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಲೈಫ್ ಸೇವಿಂಗ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್ನಲ್ಲಿ ರಾಜ್ಯ ಚಾಂಪಿಯನ್ ಆಗಿರುವುದು ವಿಶೇಷವಾಗಿದೆ. ಅತಿ ಕಿರಿಯ ವಯಸ್ಸಿನಲ್ಲಿಯೇ ನಿರಂತರ ಸಾಧನೆಯ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವ ಲಿಖಿತ್ ಅವರ ಪರಿಶ್ರಮ, ಶಿಸ್ತು ಹಾಗೂ ಕ್ರೀಡಾ ಬದ್ಧತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಇವರು ಪುತ್ತೂರು ಮೆಸ್ಕಾಂನಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ರಾಮಚಂದ್ರ ಎ. ಹಾಗೂ ದೀಪಾರಾಣಿ ದಂಪತಿಯ ಪುತ್ರ.

ಚಿಕ್ಕ ವಯಸ್ಸಿನಿಂದಲೇ ಈಜು ಕ್ರೀಡೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು, ಅನೇಕ ಸವಾಲುಗಳನ್ನು ಎದುರಿಸಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಲಿಖಿತ್ ಅವರಿಗೆ ದೊರೆತಿರುವ ಈ ಜಿಲ್ಲಾ ಮಟ್ಟದ ಗೌರವವು ಪುತ್ತೂರು ತಾಲ್ಲೂಕು ಮಾತ್ರವಲ್ಲದೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂಬುದು ಕ್ರೀಡಾಭಿಮಾನಿಗಳು, ಪೋಷಕರು ಹಾಗೂ ಹಿತೈಷಿಗಳ ಆಶಯವಾಗಿದೆ.




