Published
9 months agoon
By
Akkare Newsಸರ್ಕಾರಿ ಅಧಿಕಾರಿಯೋರ್ವರಿಗೆ ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಲಂಚದ ಬೇಡಿಕೆ ಇಟ್ಟು ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಕಂದಾಯ ಅಧಿಕಾರಿ ಪುರುಷೋತ್ತಮ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ವಿವರ: ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿಯಾಗಿರುವ ಪುರುಷೋತ್ತಮ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಂಚಾರ ತಂಡದಲ್ಲಿ (ಫ್ಲೈಯಿಂಗ್ ಸ್ಕ್ವಾಡ್) ಕರ್ತವ್ಯ ನಿರ್ವಹಿಸುತ್ತಿದ್ದು, ಎ. 5ರಂದು ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆ ವರೆಗೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ 1 ರಲ್ಲಿ ಅವರು ಕರ್ತವ್ಯ ನಿರ್ವಹಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ಅಂದು ಮಧ್ಯಾಹ್ನದವರೆಗೆ ಎಂದಿನಂತೆ ಸೋಮೇಶ್ವರ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಅದೇ ದಿನ ಮಧ್ಯಾಹ್ನ ವಾಟ್ಸ್‌ಆಯಪ್ ಕರೆ ಮಾಡಿದ್ದ ವ್ಯಕ್ತಿಯೋರ್ವ, ‘ಲೋಕಾಯುಕ್ತದಿಂದ ಮಾತನಾಡುತ್ತಿದ್ದೇವೆ. ನಿಮ್ಮ ವಿರುದ್ಧ ದೂರು ಬಂದಿದೆ. ಸಾಹೇಬರು ಮಾತನಾಡುತ್ತಾರೆ ಎಂದು ಬೇರೊಬ್ಬ ವ್ಯಕ್ತಿಗೆ ಫೋನ್ ಕೊಟ್ಟಿದ್ದು, ಆ ವ್ಯಕ್ತಿಯು ನಿಮ್ಮ ಕಚೇರಿಗೆ ಬರುವ ಮೊದಲು ಈ ವಿಚಾರವನ್ನು ಸರಿ ಮಾಡುವುದಾದರೆ ಮಾಡುವ ಎಂದು ಹೇಳಿ ಮೊದಲು ಮಾತನಾಡಿದ್ದ ವ್ಯಕ್ತಿಗೆ ಫೋನ್ ಕೊಟ್ಟಿದ್ದ. ಅಲ್ಲದೇ 80 ಸಾವಿರ ರೂ.ವನ್ನು ಫೋನ್ ಪೇ ಮೂಲಕ ಕಳುಹಿಸಲು ಹೇಳಿದ್ದರು ಎನ್ನಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿ, ‘ತನಗೆ 9 ತಿಂಗಳಿನಿಂದ ಸಂಬಳ ಆಗಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರೆ ಮಾಡಿದ ವ್ಯಕ್ತಿ 50 ಸಾವಿರ ರೂ. ಫೋನ್ ಪೇ ಮೂಲಕ ಕಳುಹಿಸಬೇಕು. ಇಲ್ಲದಿದ್ದರೆ ತೊಂದರೆ ಆಗುತ್ತದೆ ಎಂದು ಬೆದರಿಕೆ ಹಾಕಿದ್ದರು.
ಈ ವೇಳೆ ಪುರುಷೋತ್ತಮ ಅವರು ಕರೆ ಕಟ್ ಮಾಡಿದ್ದಾರೆ. ಬಳಿಕ ಕರೆ ಬಂದ ಮೊಬೈಲ್ ನಂಬರ್ ಟ್ರೂ ಕಾಲರ್ ಆಯಪ್‌ನಲ್ಲಿ ಪರಿಶೀಲಿಸಿದಾಗ ‘ಡಿ. ಪ್ರಭಾಕರ, ಲೋಕಾಯುಕ್ತ ಪಿ.ಐ’ ಎಂದು ತೋರಿಸಿತ್ತು. ಈ ಬಗ್ಗೆ ಲೋಕಾಯುಕ್ತ ಪೊಲೀಸರ ಮಂಗಳೂರು ಕಚೇರಿಯ ಅಧಿಕಾರಿಗಳಲ್ಲಿ ಪುರುಷೋತ್ತಮ ವಿಚಾರಿಸಿದ್ದಾರೆ. ಈ ವೇಳೆ ಲೋಕಾಯುಕ್ತ ಪೊಲೀಸರು ಅಂತಹ ಹೆಸರಿನ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ತಮ್ಮ ಕಚೇರಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ .
ಈ ಬಗ್ಗೆ ಕಂದಾಯ ಅಧಿಕಾರಿ ಪುರುಷೋತ್ತಮ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
‘ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿಯ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರಿಗೂ, ಕೆಲವು ಅಧಿಕಾರಿ ಗಳಿಗೂ ಇದೇ ರೀತಿ ಬೆದರಿಕೆ ಕರೆ ಬಂದಿತ್ತು. ಮೋಸದಿಂದ ಹಣ ಪಡೆದು ವಂಚಿಸುವ ದುರುದ್ದೇಶದಿಂದ ತನಗೆ ಹಾಗೂ ತಮ್ಮ ಕಚೇರಿ ಸಿಬ್ಬಂದಿಗೆ ಈ ರೀತಿ ಕರೆ ಮಾಡಲಾಗಿದೆ ಎಂದು ಪುರುಷೋತ್ತಮ ಅವರು ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಂದಾಯ ಅಧಿಕಾರಿ ಪುರುಷೋತ್ತಮ ಮಾಹಿತಿ ನೀಡಿದ್ದಾರೆ.