Published
2 days agoon
By
Akkare Newsಕರಾವಳಿ ರಾಜ್ಯಗಳಲ್ಲಿ ಮೀನು ರಫ್ತು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈಕ್ವೆಡಾರ್‌ನಂತಹ ದೇಶಗಳಿಂದ ಸಿಗಡಿಗಳ ಅತಿಯಾದ ಪೂರೈಕೆಯು ಸ್ಪರ್ಧಾತ್ಮಕ ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗಿದೆ. ರಫ್ತು ವಿಚಾರದಲ್ಲಿ ಆಂಧ್ರ ಪ್ರದೇಶ ಮತ್ತು ಗುಜರಾತ್ ಮುಂಚೂಣಿಯಲ್ಲಿವೆ.
ಮೀನು ರಫ್ತು ವಿಚಾರದಲ್ಲಿ ಕರಾವಳಿ ರಾಜ್ಯಗಳೇ ತೀವ್ರ ಕುಸಿತ ಅನುಭವಿಸಿವೆ. ಕರ್ನಾಟಕ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಆಂಧ್ರಪ್ರದೇಶ ಹಾಗೂ ಗುಜರಾತ್‌ಗೆ ಮೊದಲೆರಡು ಸ್ಥಾನದಲ್ಲಿವೆ. ಗೋವಾ ಮತ್ತು ಕೇರಳ ರಾಜ್ಯಗಳ ಮೀನು ರಫ್ತಿನಲ್ಲೂ ಇಳಿಮುಖವಾಗಿದೆ.
ರಾಜ್ಯದ ಮೀನಿನ ರಫ್ತಿನ ಪ್ರಮಾಣ 2022-23ರಲ್ಲಿ2,984 ಲಕ್ಷ ಟನ್‌ಗಳಿಂದ 2023-24ರಲ್ಲಿ 2,735 ಲಕ್ಷ ಟನ್‌ಗಳಿಗೆ ಇಳಿದಿದೆ. ಆಂಧ್ರಪ್ರದೇಶ ಮತ್ತು ಗುಜರಾತ್‌ನಲ್ಲಿ ಸಮುದ್ರ ಸಿಗಡಿಯನ್ನು ವಾಣಿಜ್ಯ ದೃಷ್ಟಿಕೋನದಲ್ಲಿ ಬೆಳೆಸುವ ಪ್ರವೃತ್ತಿಯಿಂದಾಗಿ ವಿದೇಶಗಳಿಗೆ ಹೆಚ್ಚಿನ ಮೀನಿನ ರಫ್ತು ಮಾಡಲಾಗುತ್ತಿದೆ.
ಆಂಧ್ರಪ್ರದೇಶ 2022-23ರಲ್ಲಿ 3,870 ಲಕ್ಷ ಟನ್ ಮತ್ತು 2023-24ರಲ್ಲಿ 4,272 ಲಕ್ಷ ಟನ್ ರಫ್ತು ಮಾಡಿದೆ. ಗುಜರಾತ್ 2022-23ರಲ್ಲಿ 2,934 ಲಕ್ಷ ಟನ್‌ಗಳಿಂದ 2023-24ನೇ ಸಾಲಿನಲ್ಲಿ 3,451ಲಕ್ಷ ಟನ್ ರಫ್ತು ಹೆಚ್ಚಳದೊಂದಿಗೆ ಎರಡನೇ ಸ್ಥಾನಕ್ಕೇರಿದೆ.
ಕರ್ನಾಟಕದ ಮೀನಿನ ವಿಚಾರದಲ್ಲಿ ರಫ್ತು ಮೌಲ್ಯ 2022-23ರಲ್ಲಿ 4,737.22 ಕೋಟಿ ರೂ.ನಿಂದ 2023-24ರಲ್ಲಿ 4,785.04 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ಒಟ್ಟಾರೆ ರಫ್ತು ಮೌಲ್ಯವು 2022-23ರಲ್ಲಿ 63,969.14 ಕೋಟಿ ರೂ.ನಿಂದ 2023-24ರಲ್ಲಿ 60,523.89 ಕೋಟಿ ರೂ.ಗೆ ಕುಸಿದಿದೆ.
ಈಕ್ವೆಡಾರ್‌ನಂತಹ ದೇಶಗಳಿಂದ ಸಿಗಡಿಗಳ ಅತಿಯಾದ ಪೂರೈಕೆಯೇ ಸ್ಪರ್ಧಾತ್ಮಕ ದರ ಕುಸಿತಕ್ಕೆ ಪ್ರಮುಖ ಕಾರಣ ಎನ್ನುವುದು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಅಧಿಕಾರಿಗಳ ಮೂಲಗಳು ತಿಳಿಸಿವೆ.
ಸಿಗಡಿ ವಿಚಾರದಲ್ಲಿ ಆಂಧ್ರಪ್ರದೇಶದಲ್ಲಿ 71,921 ಹೆಕ್ಟೇರ್‌ಗಳಲ್ಲಿ ಸಿಗಡಿ ಸಾಕಣೆಯಿಂದ ಶೇ.70ರಷ್ಟು ಸಿಗಡಿ ರಫ್ತು ಮಾಡಲಾಗುತ್ತಿದೆ. ಆದರೆ ಕರ್ನಾಟಕದ ವಿಚಾರದಲ್ಲಿ ಜಲಕೃಷಿ ಉತ್ಪಾದನೆ 970.39 ಹೆಕ್ಟೇರ್‌ಗಳಿಗೆ ಸೀಮಿತವಾಗಿದೆ ಎಂಬುದು ಎಂಪಿಇಡಿಎ ಮಾಹಿತಿ.