Published
7 months agoon
By
Akkare News
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಕೆಂಪು ಕಲ್ಲು ಮತ್ತು ಮರಳು ಗಣಿಗಾರಿಕೆ ಸ್ತಬ್ದಗೊಂಡು ಕರಾವಳಿಯ ಆರ್ಥಿಕ ಪರಿಸ್ಥಿತಿಗೆ ತೀವ್ರ ಹಿನ್ನಡೆಯಾಗಿದ್ದು, ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಬದುಕಿನ ಬಂಡಿ ದೂಡುವುದು ಕಷ್ಟವಾಗಿದೆ. ರಾಜ್ಯ ಸರಕಾರದ ಅಸಮರ್ಪಕ ಹಾಗೂ ಅವೈಜ್ಞಾನಿಕ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮರಳಿನ ಪೂರೈಕೆ ಸಂಪೂರ್ಣ ಸ್ತಬ್ದವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಗೃಹ ನಿರ್ಮಾಣ ಕಾರ್ಯ, ಕಟ್ಟಡ ಕಾಮಗಾರಿ ಸಂಪೂರ್ಣ ನಿಂತಿದೆ. ಈ ಉದ್ಯೋಗವನ್ನು ನಂಬಿದ ಕಾರ್ಮಿಕರ ಬದುಕು ಬೀದಿಗೆ ಬೀಳುವಂತಾಗಿದೆ.
ಕೇರಳದಲ್ಲಿ 1 ಟನ್ ಕಲ್ಲಿಗೆ ಕೇವಲ 32 ರೂಪಾಯಿ ರಾಜಧನ ನಿಗದಿಯಾಗಿದ್ದರೆ, ರಾಜ್ಯದಲ್ಲಿ ಅದೇ ಪ್ರಮಾಣದ ಕಲ್ಲಿಗೆ 290 ರೂಪಾಯಿ ರಾಜಧನವನ್ನು ನಿಗಡಿಪಡಿಸಿದೆ. ಕೇರಳ ಮಾದರಿಯ ವ್ಯವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿ , ಪ್ರತ್ಯೇಕ ಮರುಳು ನೀತಿ ಹಾಗೂ ಸರಳೀಕೃತ ಪರವಾನಿಗೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ನೀಡಿದೆ.
ಜಿಲ್ಲೆಯಲ್ಲಿ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿರುವುದು, ಸಾರ್ವಜನಿಕರಿಗೆ ಹಾಗೂ ಗುತ್ತಿಗೆದಾರರಿಗೆ ಸಂಭವಿಸಿರುವ ಅಸೌಕರ್ಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರ ನೀಡಿದ್ದು, ಬದಲಿಗೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೂಡ ಹೂಡಬೇಕು ಎಂದು ಒತ್ತಾಯಿಸಿದೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮತ್ತು ಕಿಶೋರ್ ಕುಮಾರ್ ಪುತ್ತೂರು, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ರಾಜೇಶ್ ನಾಯಕ್ ಹಾಗೂ ಭಾಗೀರಥಿ ಮುರುಳ್ಯ ನಿಯೋಗದಲ್ಲಿದ್ದರು .