Connect with us

ಇತರ

ನೇತ್ರಾವತಿ ನದಿ:ಕಾಡಾನೆಗಳ ವಿಹಾರ

Published

on

ಉಪ್ಪಿನಂಗಡಿ:ಇಲ್ಲಿಗೆ ಸಮೀಪದ ನೆಕ್ಕಿಲಾಡಿ ಗ್ರಾಮದ ದರ್ಬೆ ನಿಗರ್‌ ಗುಂಡಿ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಶುಕ್ರವಾರ ಕಾಣಿಸಿದ್ದ 2 ಕಾಡಾನೆಗಳು ರಾತ್ರಿ ವೇಳೆ ಜನವಸತಿ ಪ್ರದೇಶದತ್ತ ಬಂದು ಶನಿವಾರ ಮಧ್ಯಾಹ್ನ ಬಿಳಿಯೂರು ಪರಿಸರದಲ್ಲಿ ನೇತ್ರಾವತಿ ನದಿಯಲ್ಲಿ ಒಂದಷ್ಟು ಸಮಯ ವಿರಮಿಸಿ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸುರ್ಯ ಕಡೆಗೆ ಹೆಜ್ಜೆ ಹಾಕಿದ್ದು, ಸಂಜೆ ಸುರ್ಯ ಪರಿಸರದ ತೋಟದಲ್ಲಿ ಠಿಕಾಣಿ ಹೂಡಿದೆ.

ಅರಣ್ಯ ಇಲಾಖಾಧಿಕಾರಿಗಳು ಆನೆಗಳು ಕಾಡಿನೊಳಗೆ ಪ್ರವೇಶಿಸುವಂತೆ ತಂತ್ರೋಪಾಯಗಳನ್ನು ಅನುಷ್ಠಾನಿಸುತ್ತಿದ್ದಾರೆ.

‘ಶನಿವಾರ ಮಧ್ಯಾಹ್ನ ಬಿಳಿಯೂರು ಅಣೆಕಟ್ಟು ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡಾನೆ ಆ ಬಳಿಕ ಸರಳಿಕಟ್ಟೆ ಪರಿಸರದ ಸುಬ್ರಹ್ಮಣ್ಯ ಭಟ್‌ ಎಂಬವರ ತೋಟದಲ್ಲಿ ಇರುವುದು ಕಂಡುಬಂದಿದೆ. ಶಾಂತಿಗೋಡು ಪರಿಸರದಲ್ಲಿದ್ದ ಗಂಡು ಮತ್ತು ಹೆಣ್ಣು ಆನೆಗಳೆರಡು ನೆಕ್ಕಿಲಾಡಿಗೆ ಬಂದ ಬಳಿಕ ಬಿಳಿಯೂರು ಮಾರ್ಗವಾಗಿ ಬಾರ್ಯ ಗ್ರಾಮದ ಸುರ್ಯ ಎಂಬಲ್ಲಿ ತೋಟಕ್ಕೆ ಪ್ರವೇಶ ಮಾಡಿದೆ. ಹಸಿವು ನೀಗಲು ಆಹಾರಕ್ಕಾಗಿ ಬಾಳೆಗಿಡಗಳನ್ನು ತಿಂದಿರುವುದು ಬಿಟ್ಟರೆ ಅದು ಯಾರಿಗೂ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ಪುತ್ತೂರು ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.

ಸುಳ್ಯ ಮುಂದುವರಿದ ಕಾಡಾನೆ ಹಾವಳಿ
ಉಬರಡ್ಕ ಮಿತ್ತೂರು ಪ್ರದೇಶದ ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡುತ್ತಿರುವ ಘಟನೆ ಮುಂದುವರಿದಿದೆ.

ಉಬರಡ್ಕ ಮಿತ್ತೂರು ಗ್ರಾಮದ ಬೆಳರಂಪಾಡಿಯ ವನಶಾಸ್ತಾವು ದೇವಸ್ಥಾನದ ಹತ್ತಿರ ಶನಿವಾರ ಮುಂಜಾನೆ ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಅಡಿಕೆ, ತೆಂಗು, ಬಾಳೆಗಿಡಗಳನ್ನು ನಾಶ ಮಾಡಿದೆ. ಈ ಭಾಗದಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಕೃಷಿಕರ ಅಪಾರ ಬೆಳೆ ನಷ್ಟವಾಗುತ್ತಿದ್ದು, ಶಾಶ್ವತ ಪರಿಹಾರಕ್ಕೆ ಕೃಷಿಕರು ಆಗ್ರಹಿಸಿದ್ದಾರೆ.

 

Continue Reading
Advertisement
Exit mobile version