Connect with us

ಇತರ

ಮತ್ತೆ ಮಳೆ ಬಿಸಿಲು; ಕೃಷಿ ಲಾಭ-ನಷ್ಟ ಲೆಕ್ಕಾಚಾರ

Published

on

ಪುತ್ತೂರು :ಸತತ ಮಳೆಯಿಂದ ತೊಯ್ದು ಹೋಗಿದ್ದ ಕೃಷಿ ತೋಟಗಳಿಗೆ ಕೆಲವು ದಿನಗಳಿಂದ ಬಿಸಿಲು ಪ್ರವೇಶಿಸಿತ್ತು. ಮತ್ತೆ ಸಣ್ಣ ಮಳೆ ಐದಾರು ತಿಂಗಳಿನಿಂದ ಸುರಿದ ಧಾರಾಕಾರ ಮಳೆಯಿಂದ ಕೃಷಿ ಬೆಳೆಯನ್ನು ರಕ್ಷಿಸಿಕೊಳ್ಳಲು ತಂತ್ರಗಾರಿಕೆಯಲ್ಲಿ ತೊಡಗಿದ್ದ ಕೃಷಿಕ ಈಗ ಮಳೆ, ಬಿಸಿಲಿನ ಲಾಭ -ನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿದ್ದಾನೆ.

ಮಳೆ, ಬಿಸಿಲು- ಎರಡೂ ಹೆಚ್ಚು ಆಗಬಾರದು, ಕಡಿಮೆಯೂ ಇರಬಾರದು. ಆಯಾ ಕಾಲಘಟ್ಟದಲ್ಲಿ ಸಮಸ್ಥಿತಿಯಲ್ಲಿ ಇದ್ದಾಗ ಕೃಷಿಗೆ ಪ್ರಯೋಜನ. ಆದರೆ ಕೆಲ ವರ್ಷಗಳಿಂದ ಬಿಸಿಲು, ಮಳೆ, ಚಳಿ ಹೊತ್ತಲ್ಲದ ಹೊತ್ತಿನಲ್ಲಿ ಕಾಣಿಸಿಕೊಳ್ಳುವ ಕಾರಣ ಅದರ ಪರಿಣಾಮ ನೇರವಾಗಿ ಕೃಷಿಗೆ ತಟ್ಟುತ್ತಿದೆ.

ಹಿಂದೆ ಬಿಸಿಲಿನ ತೀವ್ರತೆಯೇ ಹೆಚ್ಚಾಗಿ ಮಳೆ ಅಪರೂಪವಾಗಿತ್ತು. ಈ ಬಾರಿ ಬಿಸಿಲೇ ಅಪರೂಪವಾಗಿ ಮಳೆಯೇ ಪಾರಮ್ಯ ಮೆರೆದಿದೆ. ಇಂತಹ ಅನಿರೀಕ್ಷಿತ ಬೆಳವಣಿಗೆಯ ಮಧ್ಯೆ ಕೃಷಿ ಉಳಿಸಿಕೊಳ್ಳಲು ಸಾಂಪ್ರದಾಯಿಕ, ವೈಜಾನಿಕ ಮಾದರಿ ಅನುಸರಿಸುತ್ತಿದ್ದಾರೆ.

ಪ್ರಯೋಗಶೀಲ ಕೃಷಿಕ ಸುರೇಶ್‌ ಬಲ್ನಾ ಡು ಹೇಳುವಂತೆ, ಕೆಲ ದಿನಗಳಿಂದ ಬಿಸಿಲು ಕಾಣಿಸಿ ಕೊಂಡಿತ್ತು. ಖಾರ ಹೆಚ್ಚಿತ್ತು. ಹೀಗಾಗಿ ಹೊಸ ಅಡಿಕೆ ಗಿಡ, ಕಾಳು ಮೆಣಸು ಗಿಡ ನಾಟಿ ಮಾಡಿದವರು ನೀರಿನ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಈಗ ವಾತಾವರಣ ಬದಲು. ಅಡಿಕೆ ಹಳೆ ಮರಗಳಿಗೆ ಬಿಸಿಲಿನಿಂದ ಹಾನಿ ಇಲ್ಲ. ಕೊಳೆರೋಗದ ಬಾಧೆ ಕೊಂಚ ದೂರವಾಗಲಿದೆ. ಅಗತ್ಯ ಇರುವ ತೋಟ ಗಳಿಗೆ ಮದ್ದು ಬಿಡಲು ಸಹಕಾರಿ. ಹಾಗೆಂದು ಬರೀ ಬಿಸಿಲು ಬಂದರೆ ಸಮಸ್ಯೆಯೂ ಇದೆ. ಅಂದರೆ ಸೆಪ್ಟಂಬರ್‌, ಅಕ್ಟೋಬರ್‌ನಲ್ಲಿ ಗೊಬ್ಬರ ಹಾಕುವ ಸಮಯ. ಗೊಬ್ಬರ ಹಾಕುವಾಗ ದಿನಕ್ಕೆ ಕನಿಷ್ಟ ಒಂದು ಮಳೆ ಬಂದರೆ ಸೂಕ್ತ ಎನ್ನುತ್ತಾರೆ ಅವರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿಗೆ ಒತ್ತು ನೀಡುತ್ತಿರುವ ಪುತ್ತೂರಿನ ಅಜಿತ್‌ ಪ್ರಸಾದ್‌ ರೈ ಹೇಳುವಂತೆ, ಕಾಫಿ ಗಿಡಕ್ಕೆ ಬಿಸಿಲಿನ ಖಾರ ತಟ್ಟುವುದನ್ನು ತಪ್ಪಿಸಲು ಅಡಿಕೆ ಸೋಗೆ ಬಳಸಿ ಮದೆ ನಿರ್ಮಿಸುವ ಕೆಲಸ ಆರಂಭಿಸಿದ್ದೇನೆ. ಅಡಿಕೆ, ಕಾಳುಮೆಣಸಿಗೆ ಗೊಬ್ಬರ, ಅಗತ್ಯ ಪೌಷ್ಟಿಕಾಂಶಗಳನ್ನುನೀಡುವ ಕೆಲಸ ಶುರುವಾಗಿದೆ. ಅಡಿಕೆಗೆ ನಾಲ್ಕನೇ ಬಾರಿಗೆ ಔಷಧ ಸಿಂಪಡಿಸುತ್ತಿದ್ದೇನೆ. ಆಯಾ ತೋಟಕ್ಕೆ ಅನುಸಾರವಾಗಿ ಬಿಸಿಲು, ಮಳೆ ಎದುರಿಸಲು ಸಿದ್ಧತೆ ಇರುತ್ತದೆ ಎನ್ನುತ್ತಾರೆ ಅವರು.

ಸುಳ್ಯ ತಾಲೂಕಿನ ಸುಬ್ರಾಯ ಭಟ್‌ ನೀರ್ಕಜೆ ಬಿಸಿಲಿನ ಕಥೆ ವಿವರಿಸುತ್ತಾ, ತೋಟದ ಕಳೆ ಕೀಳಲು ಒಳ್ಳೆಯದು. ಎಳೆ ಗಿಡ, ಬಾಳೆ ನಾಟಿಯನ್ನು ಮಾಡಬಹುದು. ಆದರೆ ನೀರಿನ ವ್ಯವಸ್ಥೆ ಬೇಕು. ತುಂಬಾ ದಿನಗಳ ನಂತರ ಬಿಸಿಲು ಬಂದಿದೆ. ಮತ್ತೆ ಮಳೆ ಬಾರದು ಎನ್ನಲಾಗದು ಎನ್ನುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version