Published
4 months agoon
By
Akkare News
ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ಸಂಪಾದಕ ಮಂಡಳಿ, ಸಾಂಸ್ಕೃತಿಕ ಸಂಘ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ (IQAC) ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ‘ಸಂಗಮ’ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪತ್ರಕರ್ತರು ಮತ್ತು ಅಂಕಣ ಬರಹಗಾರರಾದ ಪ್ರೊ. ವಿ.ಬಿ. ಅರ್ತಿಕಜೆ ಅವರು ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, “ವಿವಿಧ ವಿದ್ಯಾರ್ಥಿ ಪ್ರತಿಭೆಗಳ ಸಮಾಗಮದಿಂದ ‘ಸಂಗಮ’ ಸಂಚಿಕೆ ಸರ್ವಾಲಂಕಾರಭೂಷಿತವಾಗಿ ಮೂಡಿ ಬಂದಿದೆ. ಕಥೆಗಳ ಜೊತೆಗೆ ವಿದ್ಯಾರ್ಥಿಗಳು ಛಂದೋಬದ್ಧ ಕಾವ್ಯ ರಚನೆಗೂ ಒಲವು ಬೆಳೆಸಿಕೊಳ್ಳಬೇಕು” ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಚಂದ್ರಹಾಸ ಶೆಟ್ಟಿ ಮಾತನಾಡಿ, “ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳಲ್ಲಿ ಅಡಗಿದ ಪ್ರತಿಭೆಯನ್ನು ಹೊರತರುತ್ತದೆ. ಕಾಲೇಜಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ನೆನಪನ್ನು ಜೀವಂತವಾಗಿಟ್ಟುಕೊಳ್ಳುತ್ತದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರವಿರಾಜ ಎಸ್. ಸಂಪಾದಕ ಮಂಡಳಿಯನ್ನು ಅಭಿನಂದಿಸಿ, “ಮುಂದಿನ ವರ್ಷ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಶಸ್ತಿ ಗಳಿಸುವ ಗುರಿಯಿಂದ ಗುಣಮಟ್ಟದ ಸಂಚಿಕೆ ತಯಾರಿಸುವ ಆಶಯವಿದೆ” ಎಂದರು. ಸಂಪಾದಕರಾದ ಮಂಜುನಾಥ ಬಿ.ಆರ್. ಪ್ರಾಸ್ತಾವಿಕ ಭಾಷಣ ಮಾಡಿ, “ಸಂಚಿಕೆ ಕಾಲೇಜಿನ ಕೈಗನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ.
ವಿದ್ಯಾರ್ಥಿಗಳ ಸೃಜನಾತ್ಮಕ ಬರಹಗಳ ಜೊತೆಗೆ ಕಾಲೇಜಿನ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಒಳಗೊಂಡಿದೆ” ಎಂದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹಾಲಿಂಗೇಶ್ವರ ಭಟ್, ಅಶ್ರಫ್ ಬಸ್ತಿಕರ್, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಪ್ರವೀಣ್ ಕುಮಾರ್ ಕೆ. IQAC ಸಂಚಾಲಕರಾದ ಡಾ. ಹರಿಪ್ರಸಾದ್, ಸಂಪಾದಕ ಮಂಡಳಿ ಸದಸ್ಯರು ಡಾ. ನಂದೀಶ್ ವೈ.ಡಿ., ಮಹೇಶ ಜಿ., ಕೃಷ್ಣ ಡಿ., ಡಾ. ಮಹೇಶ್ ಕುಮಾರ್ ಕೆ.ಎಸ್., ನವೇರಿಯಾ ಬಾನು ವಿವಿಧ ವಿಭಾಗದ ಬೋಧಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ಮತ್ತು ತಂಡ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿದರು. ವಿದ್ಯಾರ್ಥಿ ಹಾತಿಮ್ ವಂದಿಸಿದರು.