Published
2 months agoon
By
Akkare News
ಮಂಗಳೂರು: ಎಂ.ಆರ್.ಜಿ. ಗ್ರೂಪ್ ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ ‘ನೆರವು-2025’ ಗುರುವಾರ ಸಂಜೆ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.
”ಈ ವರ್ಷ ನೆರವು ಯೋಜನೆ ಏಳನೇ ವರ್ಷವನ್ನು ಪೂರೈಸುತ್ತಿದೆ. ಇನ್ನು ಮೂರು ವರ್ಷಗಳ ಕಾಲ ಯೋಜನೆ ಮುಂದುವರಿಯುತ್ತದೆ. ದಶಮಾನೋತ್ಸವ ಬಳಿಕ ‘ನೆರವು’ ಯೋಜನೆಯ ಫಲಾನುಭವಿಗಳನ್ನು ಸೇರಿಸಿಕೊಂಡು ಅದಕ್ಕೊಂದು ಸಾಮೂಹಿಕ ರೂಪ ಕೊಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಪ್ರತೀ ವರ್ಷ ಕನಿಷ್ಠ ಹದಿನಾಲ್ಕು ಸಾವಿರ ಕುಟುಂಬಗಳಿಗೆ ನೆರವು ಕೊಡಲು ಸಾಧ್ಯವಾಗಲಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ, ನಮ್ಮ ನೆರವಿನ ಮೊತ್ತದಲ್ಲಿ ದೊಡ್ಡ ಭಾಗ ಇದಕ್ಕೆ ಮೀಸಲಾಗಿದೆ. ಆಧುನಿಕ ಚಿಕಿತ್ಸೆಯ ಪ್ರಜಾಪ್ರಭುತ್ವೀಕರಣದ ನಿಟ್ಟಿನಲ್ಲಿ ನಮ್ಮದೊಂದು ಕಿರು ಹೆಜ್ಜೆ ಎಂದು ನಾವು ಪ್ರಾಮಾಣಿಕವಾಗಿ ಮತ್ತು ನಮ್ಯತೆಯಿಂದ ಭಾವಿಸುತ್ತೇವೆ. ಈ ಯೋಜನೆಯನ್ನು ಆರಂಭ ಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ. ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ“ ಎಂದರು.
ಬಳಿಕ ಮಾತಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು, ”ಹುಟ್ಟುವಾಗ ಹೆಸರು ಇರುವುದಿಲ್ಲ ಉಸಿರು ಮಾತ್ರ ಇರುತ್ತದೆ. ಹೋಗುವಾಗ ಉಸಿರು ಇರುವುದಿಲ್ಲ ಹೆಸರು ಮಾತ್ರ ಉಳಿಯುತ್ತದೆ ಅನ್ನುವ ಮಾತಿನಂತೆ ಎಂ.ಆರ್.ಜಿ. ಗ್ರೂಪ್ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದೆ. ಬದುಕು ಬೆಲೆ ಕಟ್ಟಲಾರದ ಮಾಣಿಕ್ಯ ಅದರಲ್ಲಿ ಶಾಂತಿ ಸಹಬಾಳ್ವೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಪ್ರಕಾಶ್ ಶೆಟ್ಟಿಯವರ ಬದುಕು ನಮಗೆಲ್ಲರಿಗೂ ಆದರ್ಶವಾಗಬೇಕು. ಮಾನವೀಯ ಮೌಲ್ಯಗಳನ್ನು ಇಂದಿನ ಯುವಪೀಳಿಗೆ ಮತ್ತು ಮುಂದಿನ ಸಮುದಾಯಕ್ಕೆ ವರ್ಗಾಯಿಸುವ ಬಲುದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು. ಎಲ್ಲ ಜಾತಿ ಎಲ್ಲ ಸಮುದಾಯದ ಜನರನ್ನು ಒಂದೆಡೆ ಸೇರಿಸಿ ನೊಂದ ಶೋಷಿತ ಜನರ ಜೊತೆ ನಾನಿದ್ದೇನೆ ಎನ್ನುವ ಪ್ರಕಾಶ್ ಶೆಟ್ಟಿಯವರ ಮನೋಬಲಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕಿದೆ. ಸಾಮರಸ್ಯ ಮತ್ತು ಶಾಂತಿಯುತ ಸಮಾಜದ ನಿರ್ಮಾಣವಾಗಬೇಕು ಇದಕ್ಕಾಗಿ ನಾವೆಲ್ಲರೂ ಶ್ರಮಪಡಬೇಕು“ ಎಂದರು.
ವೇದಿಕೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಆಶಾ ಪ್ರಕಾಶ್ ಶೆಟ್ಟಿ, ಮೂಡಬಿದ್ರೆಯ ಅಳ್ವಾಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ.ಶೆಟ್ಟಿ ಉಪಸ್ಥಿತರಿದ್ದರು.