Connect with us

ಇತರ

ಚಿಕ್ಕಮಗಳೂರು: ಸ್ವಂತ ಕಾರಿಗೆ ‘POLICE’ ಬೋರ್ಡ್ ಹಾಕಿ ಪ್ರವಾಸ; ಐಡಿ ಕಾರ್ಡ್ ತೋರಿಸಿದ್ರೂ ಪೊಲೀಸಪ್ಪಗೆ ದಂಡ ಹಾಕಿದ ಲೇಡಿ ಸಿಂಗಂ!

Published

on

ಚಿಕ್ಕಮಗಳೂರು (ಡಿ.25): ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಅವರು ಸಾಬೀತುಪಡಿಸಿದ್ದಾರೆ. ಸ್ವಂತ ಕಾರಿಗೆ ‘ಪೊಲೀಸ್’ ಎಂದು ಬೋರ್ಡ್ ಹಾಕಿಕೊಂಡು ಫ್ಯಾಮಿಲಿ ಜೊತೆ ಪ್ರವಾಸ ಹೊರಟಿದ್ದ ಪೊಲೀಸಪ್ಪನಿಗೆ ದಂಡ ವಿಧಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಬೋರ್ಡ್ ಹಾಕಿ ಧರ್ಮಸ್ಥಳಕ್ಕೆ ಪಯಣ

ಧಾರವಾಡ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ಪ್ರವಾಸದ ವೇಳೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲೋ, ಅಧಿಕಾರ ತೋರಿಸಲೋ ತಮ್ಮ ಖಾಸಗಿ ಕಾರಿನ ಮೇಲೆ ‘ಪೊಲೀಸ್’ ಎಂಬ ನಾಮಫಲಕವನ್ನು ಅಳವಡಿಸಿಕೊಂಡಿದ್ದರು. ಈ ಕಾರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ತಲುಪಿದಾಗ ಅಸಲಿ ಕಥೆ ಶುರುವಾಗಿದೆ.

ಐಡಿ ಕಾರ್ಡ್ ತೋರಿಸಿದರೂ ದಂಡ ಹಾಕಿದ ಪಿಎಸೈ ರೇಣುಕಾ

ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಬಣಕಲ್ ಪಿಎಸೈ ರೇಣುಕಾ ಅವರು ಈ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ತಾವು ಪೊಲೀಸ್ ಇಲಾಖೆಯವರು ಎಂದು ಹೇಳಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿದ್ದಾರೆ. ಆದರೆ, ಖಾಸಗಿ ವಾಹನದ ಮೇಲೆ ಇಲಾಖೆಯ ಬೋರ್ಡ್ ಹಾಕುವುದು ನಿಯಮಬಾಹಿರ ಎಂದು ಪಿಎಸೈ ರೇಣುಕಾ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ದಂಡದ ಜೊತೆಗೆ ಬೋರ್ಡ್ ತೆರವು

ಸಹೋದ್ಯೋಗಿ ಅಥವಾ ಇಲಾಖೆಯವರು ಎಂಬ ಯಾವುದೇ ಮುಲಾಜಿಗೆ ಒಳಗಾಗದ ಪಿಎಸೈ, ನಿಯಮ ಉಲ್ಲಂಘಿಸಿದ್ದಕ್ಕಾಗಿ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರಿನ ಮೇಲಿದ್ದ ‘ಪೊಲೀಸ್’ ಬೋರ್ಡ್ ಅನ್ನು ತಕ್ಷಣವೇ ತೆರವುಗೊಳಿಸಿದ ನಂತರವಷ್ಟೇ ವಾಹನವನ್ನು ಮುಂದಕ್ಕೆ ಹೋಗಲು ಅನುಮತಿ ನೀಡಿದ್ದಾರೆ.

ಪಿಎಸೈ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

ಸಾಮಾನ್ಯವಾಗಿ ಪೊಲೀಸರು ತಮ್ಮ ಇಲಾಖೆಯವರನ್ನು ಕಂಡರೆ ಬಿಟ್ಟುಬಿಡುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ. ಆದರೆ, ರೇಣುಕಾ ಅವರು ಕಾನೂನು ಪಾಲನೆಯಲ್ಲಿ ತೋರಿದ ಈ ದಕ್ಷತೆಯನ್ನು ಕಂಡು ಸ್ಥಳೀಯರು ಮತ್ತು ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಿಯಮಗಳು ಎಲ್ಲರಿಗೂ ಒಂದೇ’ ಎಂದು ತೋರಿಸಿಕೊಟ್ಟ ಪಿಎಸೈ ಅವರ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version