Connect with us

ಇತರ

ಅಸಹಾಯಕರ ಆಶಾಕಿರಣ: ರೋಟರಿ ಕ್ಲಬ್ ಪುತ್ತೂರು ಯುವದ ಸಹಕಾರದಿಂದ ಪುತ್ತೂರಿನ ಪರ್ಲಡ್ಕದಲ್ಲಿ ಅನಾರೋಗ್ಯ ಪೀಡಿತ ಒಂಟಿ ಮಹಿಳೆ ರಕ್ಷಣೆ”

Published

on

ಪುತ್ತೂರು:ಜನವರಿ 13,ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪರ್ಲಡ್ಕ ಎಂಬಲ್ಲಿ ಕಳೆದ ಹಲವು ಸಮಯಗಳಿಂದ ಒಂಟಿಯಾಗಿ ವಾಸವಾಗಿದ್ದ ಸುಮಾರು 69 ವರ್ಷ ವಯಸ್ಸಿನ ಸಂಪ್ರದಾಯಸ್ಥ ಕುಟುಂಬದ ಅವಿವಾಹಿತ ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಬಳಲಿ ಅಸಹಾಯಕ ಸ್ಥಿತಿಗೆ ತಲುಪಿರುವ ಘಟನೆ ಸ್ಥಳೀಯರಲ್ಲಿ ಮಾನವೀಯ ಕಳಕಳಿಯನ್ನು ಹುಟ್ಟುಹಾಕಿತ್ತು.


ಸ್ಥಳೀಯ ನಿವಾಸಿಗಳ ಹಾಗೂ ಮಹಿಳೆಯ ದೊಡ್ಡಪ್ಪನ ಮಗ 86 ವರ್ಷದ ಮನೋಹರ್ ರಾವ್ ಮತ್ತು ಅವರ ಧರ್ಮಪತ್ನಿ 84 ವರ್ಷದ ಶ್ರೀಮತಿ ನಳಿನಿ ಅವರ ಮನವಿಯ ಮೇರೆಗೆ, ಸಮಾಜ ಸೇವಕರಾದ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಮಾಜಿ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಶಿಶು ಅಭಿವೃದ್ಧಿ ಇಲಾಖೆ ನಿರ್ದೇಶಕ ಹರೀಶ್, ಯೋಜನಾ ನಿರ್ದೇಶಕಿ ಶ್ರೀಮತಿ ಮಂಗಳಾ ಕಾಳೆ, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಮಹಿಳೆಯನ್ನು ರಕ್ಷಿಸಿ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ತ್ವರಿತವಾಗಿ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮಹಿಳೆ ವಾಸವಾಗಿದ್ದ ಪರಿಸರದಲ್ಲಿ ಸ್ವಜಾತಿಯ ಬಾಂಧವರಷ್ಟೇ ಅಲ್ಲದೆ ವಿವಿಧ ಜಾತಿ, ಮತ, ಧರ್ಮದವರು ಈ ಅನಾರೋಗ್ಯ ಪೀಡಿತ ಮಹಿಳೆಯ ಜೊತೆಗೆ ಪರಸ್ಪರ ಪ್ರೀತಿ–ವಿಶ್ವಾಸದಿಂದ ಇದ್ದು, ಮಹಿಳೆ ತೀವ್ರ ಅಸೌಖ್ಯಕ್ಕೆ ಒಳಗಾದಾಗ ಎಲ್ಲರೂ ದುಃಖಿತರಾಗಿ, ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಆತ್ಮೀಯವಾಗಿ ಮಾತನಾಡಿ ಧೈರ್ಯ ತುಂಬಿದ ದೃಶ್ಯ ಮನಮಿಡಿಯುವಂತಿತ್ತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಯಧುರಾಜ್ ಹಾಗೂ ಇತರ ವೈದ್ಯರು ಹಾಗೂ ಸಿಬ್ಬಂದಿಗಳು ತುರ್ತಾಗಿ ಸ್ಪಂದಿಸಿ ಮಾನವೀಯ ಸ್ಪಂದನೆ ತೋರಿದರು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಅಕ್ಕಪಡೆಯ ಪೊಲೀಸ್ ಕಾನ್ಸ್ಟೇಬಲ್‌ಗಳಾದ ಗೀತಾ, ವಾಣಿಶ್ರೀ, ವಾಹನ ಚಾಲಕ ಆನಂದ, ಗೃಹರಕ್ಷಕ ದಳದ ಸುಖಿತ, ಭವ್ಯ, ನವ್ಯ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಮಿತ್ರ, ಶಿಶು ಅಭಿವೃದ್ಧಿ ಇಲಾಖೆಯ ಸೂಪರ್ವೈಸರ್ ಶ್ರೀಮತಿ ಹರಿಣಾಕ್ಷಿ, ವಿ.ಆರ್.ಡಬ್ಲ್ಯೂ ಕಾರ್ತಿಕ್, ಆಶಾ ಕಾರ್ಯಕರ್ತೆ ಶ್ರೀಮತಿ ವೀಣಾ, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಸುನಂದ ಸೇರಿದಂತೆ ಹಲವರು ಉತ್ತಮ ರೀತಿಯಲ್ಲಿ ಸಹಕರಿಸಿದರು.

ಸ್ಥಳೀಯರಾದ ನಾಗೇಶ್ ಪ್ರಭು, ದಿಗ್ವಿಜಯ್ ನಾಯಕ್, ವರದರಾಜ ನಾಯಕ್, ಸುಲತಾ ನಾಯಕ್, ವಿಭಾ ನಾಯಕ್, ಚಂದ್ರಕಾಂತ ಪೈ, ದಿನೇಶ್ ಪೈ, ಕು. ದೇವಿಕಾ ಪೈ, ಮಾಜಿ ಪುರಸಭಾ ಸದಸ್ಯೆ ದೀಕ್ಷಾ ಪೈ, ಗಾಯತ್ರಿ ಕಾಮತ್, ವಿಶ್ವಾಸ್ ಶೆಣೈ, ಅಝೀಜ್, ಇಸ್ಮಾಯಿಲ್, ಫಾರೂಕ್, ಜಯರಾಮ್ ಕುಲಾಲ್, ಅಮ್ಮಿ ಸೇರಿದಂತೆ ಅನೇಕರು ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು.

ಈ ಘಟನೆ ಸಮಾಜದಲ್ಲಿ ಒಂಟಿಯಾಗಿ ಬದುಕುತ್ತಿರುವ ಅಸಹಾಯಕ ಮಹಿಳೆಯರು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಬೇಕಿಲ್ಲ ಎಂಬ ಭರವಸೆಯನ್ನು ಮೂಡಿಸಿದೆ. ನೋವು ಮತ್ತು ಅಸಹಾಯತೆಯ ಅಂಚಿನಲ್ಲಿ ನಿಂತವರಿಗೆ ಮಾನವೀಯ ಸ್ಪಂದನೆ ಎಷ್ಟು ಅಗತ್ಯವೋ ಎಂಬುದನ್ನು ಈ ಕಾರ್ಯಾಚರಣೆ ಸ್ಪಷ್ಟಪಡಿಸಿದೆ. ಜಾತಿ, ಧರ್ಮ, ಭಾಷೆಯ ಎಲ್ಲ ಭೇದಗಳನ್ನು ಮೀರಿ ಸಾರ್ವಜನಿಕರು ಹಾಗೂ ಸರಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು ಒಗ್ಗಟ್ಟಾಗಿ ಕೈಜೋಡಿಸಿದ ಈ ಮಾನವೀಯ ಪ್ರಯತ್ನವು ಸಮಾಜಕ್ಕೆ ಮಾದರಿಯಾಗಿದೆ.

ಈ ರಕ್ಷಣಾ ಕಾರ್ಯಾಚರಣೆಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರು ಯುವ ಇದರ ಮಾಜಿ ಅಧ್ಯಕ್ಷರು, ಸಮಾಜ ಸೇವಕರಾದ ಪುತ್ತೂರು ಉಮೇಶ್ ನಾಯಕ್ ಅವರ ಮುನ್ನಡೆ ಮತ್ತು ಮಾರ್ಗದರ್ಶನ ಪ್ರಮುಖ ಕಾರಣವಾಗಿದ್ದು, ನೂರಾರು ನಿರ್ಗತಿಕರು ಹಾಗೂ ಅನಾಥರಿಗೆ ಪುನರ್ವಸತಿ ಕಲ್ಪಿಸಿರುವ ಅವರ ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಮಾನವೀಯತೆಯ ಮೌಲ್ಯ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಸಾಕ್ಷಿಯಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version